ಕಾಸರಗೋಡು ಆರ್.ಎಂ.ಎಸ್. ಕಣ್ಣೂರು ನ್ಯಾಶನಲ್ ಸೋರ್ಟಿಂಗ್ ಎಚ್ನಲ್ಲಿ ವಿಲೀನ: ಜಿಲ್ಲೆಯಲ್ಲಿ ಅಂಚೆ ವಿತರಣೆ ವಿಳಂಬ ಸಾಧ್ಯತೆ
ಕಾಸರಗೋಡು: ಕಾಸರಗೋಡು ಪ್ರಧಾನ ಅಂಚೆ ಕಚೇರಿಯಲ್ಲಿ ಕಾರ್ಯವೆಸಗುತ್ತಿರುವ ರೈಲ್ವೇ ಮೈಲ್ ಸರ್ವೀಸ್ (ಆರ್ಎಂಎಸ್) ಕೇಂದ್ರವನ್ನು ಕಣ್ಣೂರು ನ್ಯಾಶನಲ್ ಸೋರ್ಟಿಂಗ್ ಹಬ್ (ಎನ್ಎಸ್ಎಚ್)ನೊಂದಿಗೆ ವಿಲೀನಗೊಳಿಸಲು ಕೇಂದ್ರ ವಾರ್ತಾವಿನಿಮಯ (ಕಮ್ಯೂನಿಕೇಷನ್) ಸಚಿವಾಲಯ ತೀರ್ಮಾನಿಸಿದೆ. ಈ ವರ್ಷ ಡಿಸೆಂಬರ್ ತಿಂಗಳೊಳಗಾಗಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಕಾಸರಗೋಡು ಮಾತ್ರವಲ್ಲ ತಲಶ್ಶೇರಿ ಪ್ರಧಾನ ಅಂಚೆಕಚೇರಿಯನ್ನೂ ಕಣ್ಣೂರು ಹಬ್ನಲ್ಲಿ ವಿಲೀನಗೊಳಿಸುವ ತೀರ್ಮಾನ ವನ್ನೂ ಕೇಂದ್ರ ಕೈಗೊಂಡಿದೆ.ಅಂಚೆ ಪತ್ರಗಳು, ಪಾರ್ಸಲ್ಗಳು, ರಿಜಿಸ್ಟರ್ಡ್ ಪೋಸ್ಟ್ ಇತ್ಯಾದಿಗಳನ್ನು ಮೊದಲು ಕಾಸರಗೋಡಿನ ಆರ್ಎಂಎಸ್ ಕಚೇರಿಗೆ ತಂದು ಅಲ್ಲಿ ಅವುಗಳನ್ನು ವಿಳಾಸದ ಆಧಾರದಲ್ಲಿ ಆಯಾ ಅಂಚೆಕಚೇರಿಗಳಿಗೆ ಹೊಂದಿಕೊಂಡು ಪ್ರತ್ಯೇಕ ಪ್ರತ್ಯೇಕಗೊಳಿಸಿದ ಬಳಿಕ ಅವುಗಳನ್ನು ಸಂಬಂಧಪಟ್ಟ ಅಂಚೆ ಕಚೇರಿಗಳಿಗೆ ತಲುಪಿಸಲಾಗುತ್ತಿದೆ. ಇದು ಆರ್ಎಂಎಸ್ನ ದೈನಂದಿನ ಕೆಲಸವಾಗಿದೆ. ಆದರೆ ಕಾಸರಗೋಡು ಆರ್ಎಂಎಸ್ನ್ನು ಕಣ್ಣೂರು ನ್ಯಾಶನಲ್ ಹಬ್ನೊಂದಿಗೆ ವಿಲೀನಗೊಳಿಸಿದಲ್ಲಿ ಕಾಸರಗೋಡು ಆರ್ಎಂಎಸ್ ಕೇಂದ್ರ ಇಲ್ಲದಾಗಲಿದೆ ಮಾತ್ರವಲ್ಲದೆ ಜಿಲ್ಲೆಯ ಅಂಚೆ ಪತ್ರಗಳನ್ನು ಸಂಗ್ರಹಿಸಿ ಅವುಗಳನ್ನು ಕಣ್ಣೂರು ಹಬ್ಗೆ ಸಾಗಿಸಿ ಅಲ್ಲಿ ಅವುಗಳನ್ನು ಸೋರ್ಟಿಂಗ್ ನಡೆಸಿ ಸಂಬಂಧಪಟ್ಟ ಅಂಚೆ ಕಚೇರಿಗಳಿಗೆ ಕಳುಹಿಸಿಕೊಡಬೇಕಾಗಿ ಬರಲಿದೆ. ಹಾಗೆ ನಡೆದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಅಂಚೆ ವಿತರಣೆ ಪ್ರಕ್ರಿಯೆಗಳು ವಿಳಂಬಗೊಳ್ಳುವುದಂತೂ ಖಂಡಿತವಾಗಿದೆ. ಸಾಧಾರಣ ಪೋಸ್ಟ್ನ ಹೊರತಾಗಿ ಸ್ಪೀಡ್ ಪೋಸ್ಟ್, ರಿಜಿಸ್ಟರ್ಡ್ ಪೋಸ್ಟ್ ಮತ್ತು ಪಾರ್ಸಲ್ಗಳ ವಿತರಣೆಯೂ ವಿಳಂಬಗೊಳ್ಳಲಿದೆ.ಜಿಲ್ಲೆಯಲ್ಲಿ ಏಕ ಮಾತ್ರ ಸ್ಪೀಡ್ ಪೋಸ್ಟ್ ಕೇಂದ್ರ ಹೊಂದಿರುವ ಅಂಚೆ ಕಚೇರಿಯೂ ಆಗಿದೆ ಕಾಸರಗೋಡು ಪ್ರಧಾನ ಅಂಚೆ ಕಚೇರಿ. ಸ್ಪೀಡ್ ಪೋಸ್ಟ್ಗೆ 50 ಗ್ರಾಂಗೆ 41 ರೂ. ಮತ್ತು ರಿಜಿಸ್ಟರ್ಡ್ ಎಂಎಡಿಗೆ 20 ಗ್ರಾಂಗೆ 20.50 ರೂ. ಸ್ಟಾಂಪ್ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇವುಗಳ ವಿತರಣೆಯು ಇನ್ನೂ ವಿಳಂಬಗೊಳ್ಳಲಿದೆ.ಕಾಸರಗೋಡು ಆರ್ಎಂಎಸ್ ಕೇಂದ್ರವನ್ನು ಕಣ್ಣೂರು ನ್ಯಾಶನಲ್ ಹಬ್ನೊಂದಿಗೆ ವಿಲೀನಗೊಳಿಸಿದ್ದಲ್ಲಿ ಕಾಸರಗೋಡು ಆರ್ಎಂಎಸ್ ಕೇಂದ್ರವನ್ನು ಶಾಶ್ವತವಾಗಿ ಮುಚ್ಚಬೇಕಾಗಿಯೂ ಬರಲಿದೆ. ಕಾಸರಗೋಡು ಜಿಲ್ಲೆ ರೂಪೀಕರಣಗೊಂಡ ಬಳಿಕ 1984ರಲ್ಲಿ ಕಾಸರಗೋಡುನಲ್ಲಿ ಆರ್ಎಂಎಸ್ ಕೇಂದ್ರ ಆರಂಭಿಸಲಾಗಿತ್ತು. ಈ ಕೇಂದ್ರದಲ್ಲಿ 25 ಖಾಯಂ ಹಾಗೂ 6 ತಾತ್ಕಾಲಿಕ ಸಿಬ್ಬಂದಿಗಳು ದುಡಿಯುತ್ತಿದ್ದಾರೆ. ಈ ಕೇಂದ್ರವನ್ನು ರದ್ದುಪಡಿಸಿದ್ದಲ್ಲಿ ಇದರ ಸಿಬ್ಬಂದಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ ನೇಮಕಗೊಳಿಸಬೇಕಾದ ಸ್ಥಿತಿಯೂ ಉಂಟಾಗಲಿದೆ.