ಕಾಸರಗೋಡು ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾವಣೆ: ಪರ್ಯಾಯವಾಗಿ ಜಿ. ಗೋಪಕುಮಾರ್ ನೇಮಕ
ಕಾಸರಗೋಡು: ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಕೆ. ಬಾಲಕೃಷ್ಣನ್ರನ್ನು ಆಲಪ್ಪುಳ ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾ ಧೀಶರನ್ನಾಗಿ ವರ್ಗಾಯಿಸಲಾಗಿದೆ.
ಕಾಸರಗೋಡು ಹಳೆ ಸೂರ್ಲಿನ ಮದ್ರಸಾ ಅಧ್ಯಾಪಕ ಮೂಲತಃ ಕೊಡಗು ನಿವಾಸಿ ರಿಯಾಸ್ ಮೌಲವಿ ಕೊಲೆ ಪ್ರಕರಣದ ತೀರ್ಪನ್ನು ಕೆಲವು ದಿನಗಳ ಹಿಂದೆ ಇದೇ ನ್ಯಾಯಾಧೀಶರು ನೀಡಿದ್ದರು. ಆದರೆ ಈ ತೀರ್ಪು ಮತ್ತು ಅವರ ವರ್ಗಾವಣೆಗೆ ಯಾವುದೇ ರೀತಿಯ ಸಂಬಂಧವಿಲ್ಲವೆಂದು ಸಂಬಂಧಪ ಟ್ಟವರು ಸ್ಪಷ್ಟಪಡಿಸಿದ್ದಾರೆ.
ಕೆ.ಕೆ. ಬಾಲಕೃಷ್ಣನ್ ಕಳೆದ ಅಗೋಸ್ತ್ ೧ರಂದು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಧೀ ಶರಾಗಿ ಅಧಿಕಾರ ವಹಿಸಿಕೊಂಡಿದ್ದರು. ಕಾಸರಗೋಡಿಗೆ ವರ್ಗಾವಣೆಗೊಳ್ಳುವ ಮೊದಲು ಅವರು ಎರ್ನಾಕುಳಂ ಸಮೀಪದ ನ್ಯಾಯಾಲಯಕ್ಕೆ ವರ್ಗಾವಣೆ ಲಭಿಸುವ ಆಸಕ್ತಿ ವ್ಯಕ್ತಪಡಿಸಿದ್ದರೆನ್ನಲಾಗಿದೆ. ಇವರು ವಡಗರೆ ನಿವಾಸಿಯಾಗಿದ್ದಾರೆ.
ಕೇರಳ ಹೈಕೋರ್ಟ್ನ ಕಂಪ್ಯೂಟರ್ ಐಟಿ ವಿಭಾಗದ ರಿಜಿಸ್ಟ್ರರ್ ಹಾಗೂ ಜಿಲ್ಲಾ ನ್ಯಾಯಧೀಶರೂ ಆಗಿರುವ ಜಿ. ಗೋಪಕುಮಾರ್ರನ್ನು ಈಗ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ. ಇವರು ಈ ಹಿಂದೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಧೀಶರಾಗಿ ಸೇವೆ ಸಲ್ಲಿಸಿದ್ದರು..