ಕಾಸರಗೋಡು ಜಿಲ್ಲೆಗೆ ಲಭಿಸಿದ್ದು ಶೇ. 81ರಷ್ಟು ಮಳೆ ಮಾತ್ರ: ಅತೀ ಹೆಚ್ಚು ಸುರಿದದ್ದು ಕಣ್ಣೂರಿನಲ್ಲಿ
ಕಾಸರಗೋಡು: ರಾಜ್ಯದಲ್ಲಿ ಮಳೆ ಬಿರುಸುಗೊಂಡ ಒಂದು ವಾರದಲ್ಲಿ ಕಾಸರಗೋಡು ಜಿಲ್ಲೆಗೆ ವಾಡಿಕೆ ಪ್ರಮಾಣಕ್ಕಿಂತ ಶೇ. ೮೧ರಷ್ಟು ಮಳೆ ಮಾತ್ರವೇ ಲಭಿಸಿದೆ. ಆದರೆ ರಾಜ್ಯದಾದ್ಯಂತವಾಗಿ ವಾಡಿಕೆ ಮಳೆಗಿಂತ ಹೆಚ್ಚು ಎಂಬಂತೆ ಶೇ. 110ರಷ್ಟು ಮಳೆ ಲಭಿಸಿದೆ.
ರಾಜ್ಯದಲ್ಲಿ ಈ ತಿಂಗಳ 13ರಿಂದ ಮಳೆ ಬಿರುಸುಗೊಳ್ಳತೊಡಗಿವೆ. ಜುಲೈ 19ರ ತನಕದ ಲೆಕ್ಕಾಚಾರ ಪ್ರಕಾರ ರಾಜ್ಯದಲ್ಲಿ ಅತೀ ಹೆಚ್ಚು ಎಂಬಂತೆ ಕಣ್ಣೂರು ಜಿಲ್ಲೆಯಲ್ಲಿ ವಾಡಿಕೆ ಪ್ರಕಾರ 208.6 ಮಿಲ್ಲಿ ಮೀಟರ್ ಮಳೆ ಲಭಿಸಬೇಕಾದ ಜಾಗದಲ್ಲಿ 565.6 ಮಿಲ್ಲಿ ಮೀಟರ್ ಮಳೆ ಲಭಿಸಿದೆ. ಅಂದರೆ ವಾಡಿಕೆಗಿಂತ ಶೇ. 171ರಷ್ಟು ಹೆಚ್ಚು ಮಳೆ ಈ ಅವಧಿಯಲ್ಲಿ ಲಭಿಸಿದೆ. ಅತೀ ಹೆಚ್ಚು ಮಳೆ ಲಭಿಸಿದ ನಂತರದ ಸ್ಥಾನದಲ್ಲಿ ಮಾಹಿ (ಶೇ. ೬೦ ಮಿಲ್ಲಿ ಲೀ) ಇದೆ.
ಕಾಸರಗೋಡು, ಇಡುಕ್ಕಿ ಮತ್ತು ಎರ್ನಾಕುಳಂ ಜಿಲ್ಲೆಗಳನ್ನು ಹೊರತುಪಡಿಸಿದರೆ ರಾಜ್ಯದ ಇತರ ಎಲ್ಲಾ ಜಿಲ್ಲೆಗಳಲ್ಲೂ ಶೇ. 100ಕ್ಕಿಂತಲೂ ಹೆಚ್ಚು ಮಳೆ ಲಭಿಸಿದೆ. ಕಾಸರಗೋಡಿನಲ್ಲಿ 396.2 ಎಂ.ಎಂ. ಮಳೆ ಲಭಿಸಿದೆ.
ರಾಜ್ಯದಲ್ಲಿ ಜುಲೈ 13ರ ತನಕ ಲಭಿಸಿದ ಒಟ್ಟು ಮಳೆಯಲ್ಲಿ ಶೇ. 27ರಷ್ಟು ಮಳೆ ಕುಸಿತವುಂಟಾಗಿದೆ.