ಕಿಳಿಂಗಾರು ಸಾಯಿರಾಂ ಭಟ್ ಪುಣ್ಯತಿಥಿಯಂದು ಹೊಲಿಗೆ ಯಂತ್ರ ವಿತರಣೆ
ಬದಿಯಡ್ಕ: ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ಪ್ರಥಮಪುಣ್ಯ ತಿಥಿಯ ಸಂದರ್ಭದಲ್ಲಿ ನಿನ್ನೆ ಅವರ ಪುತ್ರ ಸಾಯಿರಾಂ ಕೃಷ್ಣ ಭಟ್ ಅವರು ಬಡಜನತೆಗೆ ನೆರವಾಗುವ ನಿಟ್ಟಿನಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಮಹಿಳೆಯರು ಸ್ವಾವಲಂಬಿಯಾಗಿ ಜೀವನವನ್ನು ನಡೆಸಲು ಮುಂದಾದರೆ ಆ ಕುಟುಂಬವು ಬೆಳಗಬಲ್ಲದು. ಮಕ್ಕಳ ವಿದ್ಯಾಭ್ಯಾಸ, ದೈನಂದಿನ ವೆಚ್ಚಗಳನ್ನು ಸರಿದೂಗಿಸಲು ಮನೆಯ ಯಜಮಾನನೊಂದಿಗೆ ಸಹಕರಿಸಿದಾಗ ಆರ್ಥಿಕ ಹೊರೆಯನ್ನು ತಗ್ಗಿಸಲು ಸಾಧ್ಯವಿದೆ ಎಂದರು. ಹಿರಿಯ ವೈದಿಕ ವಿದ್ವಾಂಸ ವೇದಮೂರ್ತಿ ಕಿಳಿಂಗಾರು ನಡುಮನೆ ಗೋಪಾಲಕೃಷ್ಣ ಭಟ್ ಹೊಲಿಗೆಯಂತ್ರದ ಚೆಕ್ ವಿತರಿಸಿದರು. ಫಲಾನುಭವಿಗಳಾದ ಕಿಳಿಂಗಾರು ಬಾಲಗಿರಿಯ ಅನುಶ್ರೀ, ಸುಪ್ರಿಯಾ, ಚಿತ್ರಾವತಿ ಬೇಳ, ಮಂಜುಶ್ರೀ ದರ್ಭೆತ್ತಡ್ಕ, ಅಮಿಶಾ ಶಿರಿಬಾಗಿಲು ಈ ನಾಲ್ಕು ಮಂದಿಗೆ ಹೊಲಿಗೆ ಯಂತ್ರದ ಚೆಕ್ ವಿತರಿಸಲಾಯಿತು. ಇದೇ ವೇಳೆ ಕುಂಟ್ಯಾನ ಮುಂಡಕಾನ ಇವರಿಗೆ ಚಿಕಿತ್ಸೆಗೆ ಹಾಗೂ ಅಳಿಕೆ ವಿದ್ಯಾಸಂಸ್ಥೆಗಳಿಗೆ ಧನಸಹಾಯ ನೀಡಲಾಯಿತು. ನಿವೃತ್ತ ಅಧ್ಯಾಪಕ ಸುಬ್ರಾಯ ಭಟ್, ಪಂಚಾಯತ್ ಸದಸ್ಯ ಶಂಕರ ಡಿ., ವಿಷ್ಣು ಭಟ್, ಉದನೇಶ್ವರ ಭಟ್, ಸತ್ಯನಾರಾಯಣ ಭಟ್ ಗೋಳಿತ್ತಡ್ಕ, ಗೋವಿಂದ ಭಟ್, ಶಾರದಾ ಸಾಯಿರಾಂಭಟ್, ಸಂದೇಶ ವಾರಣಾಸಿ ಜೊತೆಗಿದ್ದರು.