ಕುಂಬಳೆಯಲ್ಲಿ ವ್ಯಾಪಕಗೊಂಡ ಆಟಿಕೆ ನೋಟುಗಳು: ವ್ಯಾಪಾರಿಗಳು ಆತಂಕದಲ್ಲಿ
ಕುಂಬಳೆ: ಕುಂಬಳೆ ಹಾಗೂ ಪರಿಸರ ಪ್ರದೇಶಗಳಲ್ಲಿ ಅಸಲಿ ನೋಟುಗಳನ್ನೇ ಹೋಲುವ ಆಟಿಕೆ ನೋಟುಗಳು ವ್ಯಾಪಕಗೊಂಡಿದ್ದು, ಇದರಿಂದ ವ್ಯಾಪಾರಿಗಳ ಸಹಿತ ಸಾರ್ವಜನಿಕರು ತೀವ್ರ ಸಮಸ್ಯೆಗೊಳ ಗಾಗಿದ್ದಾರೆ. ಒಂದು ವಾರದೊಳಗೆ ಕಳತ್ತೂರು ಹಾಗೂ ಬಂಬ್ರಾಣದಲ್ಲಿ 500, 200 ರೂಪಾಯಿಗಳ ಅಸಲಿ ನೋಟುಗಳನ್ನು ಹೋಲುವ ಆಟಿಕೆ ನೋಟುಗಳನ್ನು ಯಾರೋ ನೀಡಿ ವಂಚಿಸಿದ್ದಾರೆಂದು ವ್ಯಾಪಾರಿಗಳು ದೂರಿದ್ದಾರೆ. ಅಂಗಡಿಗಳಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿದ್ದ ಸಮಯದಲ್ಲಿ ಅಸಲಿ ನೋಟುಗಳನ್ನು ಹೋಲುವ ಆಟಿಕೆ ನೋಟುಗಳನ್ನು ನೀಡಿ ವಂಚಿಸುವ ತಂಡ ಸಕ್ರಿಯವಾ ಗಿದೆಯೆಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಅಸಲಿ ನೋಟಿನ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಎಂದು ಬರೆದಿರುವಲ್ಲಿ ‘ಫುಲ್ ಆಫ್ ಫನ್’ ಎಂದು ಮುದ್ರಿಸಿದ್ದು, ಬಾಕಿ ಎಲ್ಲಾ ಅಸಲಿ ನೋಟುಗಳನ್ನು ಹೋಲುತ್ತಿದೆ. ಗಾಂಧೀಜಿಯವರ ಚಿತ್ರ ಅದೇ ರೀತಿಯಲ್ಲೇ ಮುದ್ರಿಸಲಾಗಿದೆ. ಅಸಲಿ ನೋಟಿನ ಅಳತೆಯಲ್ಲೇ ಈ ಆಟಿಕೆ ನೋಟುಗಳು ಇವೆ. ಆದ್ದರಿಂದ ತಕ್ಷಣ ನೋಟನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಚೈನೀಸ್ ಮಿಠಾಯಿಗಳೊಂದಿಗೆ ಇಂತಹ ನೋಟುಗಳು ಲಭಿಸುತ್ತಿರುವುದಾಗಿ ಜನರು ಹೇಳುತ್ತಿದ್ದಾರೆ. ಈ ಬಗ್ಗೆ ವ್ಯಾಪಕ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸ್ ತನಿಖೆ ಆರಂಭಗೊಂಡಿದೆ.