ಕುಂಬಳೆಯ ಶಾಲಾ ಆವರಣದ ಮರ ಕುಸಿದು ರಸ್ತೆಗೆ ಬಿದ್ದು ಅಪಾಯ: 2 ವಿದ್ಯುತ್ ಕಂಬಗಳು ಮುರಿದು ಬಿದ್ದು ಓರ್ವನಿಗೆ ಗಾಯ
ಕುಂಬಳೆ: ಕುಂಬಳೆ ಜಿಎಸ್ಬಿ ಶಾಲೆ ಆವರಣದಲ್ಲಿ ಮರ ರಸ್ತೆಗೆ ಬಿದ್ದು ಎರಡು ವಿದ್ಯುತ್ ಕಂಬಗಳು ಹಾನಿಗೊಂಡಿದೆ. ಈ ಸಮಯದಲ್ಲಿ ಆ ಮೂಲಕ ನಡೆದು ಹೋಗುತ್ತಿದ್ದ ಆಂಧ್ರ ನಿವಾಸಿ ಹಾಗೂ ಕುಂಬಳೆಯಲ್ಲಿ ಕಾಂಕ್ರೀಟ್ ಕಾರ್ಮಿಕನಾಗಿದ್ದ ಸಾಯಿಕೃಷ್ಣ ರೆಡ್ಡಿ (49) ಗಾಯಗೊಂಡಿದ್ದು, ಇವರನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಬೆಳಿಗ್ಗೆ 10 ಗಂಟೆಗೆ ಘಟನೆ ನಡೆದಿದೆ.
ಶಾಲೆಗಾಗಿ ಹೊಸ ಕಟ್ಟಡ ನಿರ್ಮಿಸುವುದಕ್ಕೆ ಬೇಕಾಗಿ ಮಣ್ಣು ತೆರವುಗೊಳಿಸಿ ಮರದ ಒಂದು ಭಾಗದ ರೆಂಬೆಗಳನ್ನು ಮುರಿದು ತೆಗೆದಿದ್ದರು. ಆದರೆ ರಸ್ತೆಗೆ ವಾಲಿಕೊಂಡಿದ್ದ ರೆಂಬೆಗಳನ್ನು ಹಾಗೇ ಉಳಿಸಲಾಗಿತ್ತು. ಇದು ಮರ ರಸ್ತೆಗೆ ಬೀಳಲು ಕಾರಣವಾಗಿರುವುದೆಂದು ಶಂಕಿಸಲಾಗಿದೆ. ಕುಂಬಳೆ ಠಾಣೆಯ ಎಸ್ಐ ಕೆ. ಶ್ರೀಜೇಶ್ರ ನೇತೃತ್ವದಲ್ಲಿರುವ ಪೊಲೀಸರು ಹಾಗೂ ಅಗ್ನಿಶಾಮಕದಳ ತಲುಪಿ ಮರವನ್ನು ಮುರಿದು ತೆಗೆಯಲಾಗಿದೆ. ನಿನ್ನೆ ಶಾಲೆಗೆ ರಜೆ ಆದ ಕಾರಣ ಸಂಭವನೀಯ ದುರಂತ ತಪ್ಪಿಹೋಗಿರುವುದಾಗಿ ಸ್ಥಳೀಯರು ಅಭಿಪ್ರಾಯಪಟ್ಟರು.