ಕುಂಬಳೆ ಪಂಚಾಯತ್‌ನಲ್ಲಿ ಸದಸ್ಯೆಯರ ಪತಿಯಂದಿರ ಆಡಳಿತ; ಆಡಳಿತಗಾರರು ಬೇನಾಮಿಗಳು- ಬಿಜೆಪಿ
ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್‌ನಲ್ಲಿ ಸದಸ್ಯೆಯರ ಪತಿಯಂದಿರ ಆಡಳಿತವಾಗಿದೆ ಎಂದು ಬಿಜೆಪಿ ಪಂ. ಸಮಿತಿ ಪತ್ರಿಕಾಗೋಷ್ಠಿ ಯಲ್ಲಿ ಆರೋಪಿಸಿದೆ. ಆಡಳಿತಗಾರರು ಬೇನಾಮಿಗಳಾಗಿ ಮಾತ್ರ ನಿಂತಿದ್ದಾರೆಂದು ಅವರು ತಿಳಿಸಿದರು. ಪಂಚಾಯತ್‌ನಲ್ಲಿ ನಡೆದ ಲಕ್ಷಾಂತರ ರೂಪಾಯಿಗಳ ವಂಚನೆ ಅಧ್ಯಕ್ಷೆಯ ಅರಿವಿನಿಂದಲೇ ನಡೆದಿದೆ ಎಂದೂ, ಆದ್ದರಿಂದ ಅಧಕ್ಷೆ ರಾಜೀನಾಮೆ ನೀಡಿ ತನಿಖೆ ಎದುರಿ ಸಬೇಕೆಂದು ಬಿಜೆಪಿ ಪಂಚಾಯತ್ ಸಮಿತಿ ಪದಾಧಿಕಾರಿ ಗಳಾದ ಸುಜಿತ್ ರೈ, ಪ್ರದೀಪ್ ಕುಮಾರ್, ವಿವೇಕಾನಂದ ಶೆಟ್ಟಿ, ಪಂ. ಸದಸ್ಯರಾದ ಎಸ್. ಪ್ರೇಮಲತ, ಕೆ. ಮೋಹನ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಪಟ್ಟರು.
೧೧ಲಕ್ಷಕ್ಕೂ ಹೆಚ್ಚು ಮೊತ್ತ ವಂಚನೆ ನಡೆದ ಘಟನೆಯಲ್ಲಿ ಅಕೌಂಟೆಂಕ್‌ನನ್ನು ಮಾತ್ರ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಹೊಣೆಗಾರಿಕೆಯಿಂದ ಪಾರಾಗಲು ಅಧ್ಯಕ್ಷೆ ಹಾಗೂ ಆಡಳಿತ ಸಮಿತಿ ಪ್ರಯತ್ನಿಸುತ್ತಿದೆ. ಲಕ್ಷಾಂತರ ರೂಪಾಯಿಗಳ ವಂಚನೆ ಅಧ್ಯಕ್ಷೆ ತಿಳಿದಿಲ್ಲ ಎನ್ನುತ್ತಿರುವುದು ಪಂಚಾಯತ್‌ನ ಜನರನ್ನು ಮೋಸಗೊಳಿಸುವುದಕ್ಕೆ ಸಮಾನವಾಗಿದೆ. ಘಟನೆ ಬಹಿರಂಗಗೊಂಡಂದಿನಿಂದ ನಿಗೂಢತೆಯೇ ಕಾಣಿಸತೊಡಗಿದೆ. ಪಂಚಾಯತ್ ಅಧ್ಯಕ್ಷೆ ಹಾಗೂ ಆಡಳಿತಕ್ಕೆ ನೇತೃತ್ವ ನೀಡುತ್ತಿರುವವರು ಯಾರಿಗೋ ಹೆದರುತ್ತಿದ್ದಾರೆ ಎಂದು ಅವರ ವರ್ತನೆಯಲ್ಲಿ ತಿಳಿದು ಬರುತ್ತಿದೆ. ೫ ಲಕ್ಷ ರೂಪಾಯಿ ವಂಚನೆ ನಡೆಸಲಾಗಿದೆ ಎಂದು ಮೊದಲು ತಿಳಿಸಲಾಗಿತ್ತು. ಅನಂತರ ಅದನ್ನು ಮಾಧ್ಯಮಗಳ ಮುಂದೆ ತಿದ್ದುಪಡಿ ನಡೆಸಿ ತಿಳಿಸಿದರು. ವಿಜಿಲೆನ್ಸ್‌ಗೆ ದೂರು ನೀಡಿರುವುದಾಗಿ ಕಳೆದ ಗುರುವಾರ ನಡೆದ ಬೋರ್ಡ್ ಸಭೆಯಲ್ಲಿ ಅಧ್ಯಕ್ಷೆ ತಿಳಿಸಿದ್ದರು. ಆದರೆ ಎರಡು ದಿನ ಕಳೆದ ಬಳಿಕವೇ ದೂರು ನೀಡಲಾಗಿದೆ. ಎಲ್ಲಾ ವಿಷಯದಲ್ಲೂ ಸುಳ್ಳನ್ನೇ ಹೇಳುತ್ತಿದ್ದಾರೆ. ಪಂಚಾಯತ್ ಭ್ರಷ್ಟಾಚಾರದ ಕೇಂದ್ರವಾಗಿ ಬದಲಾಗಿದೆ. ಭ್ರಷ್ಟಾಚಾರದ ವಿಷಯದಲ್ಲಿ ಸಿಪಿಎಂ ಹಾಗೂ ಎಸ್‌ಡಿಪಿಐ ಆಡಳಿತಗಾರರೊಂದಿಗಿದೆ. ವಿಜಿಲೆನ್ಸ್‌ಗೆ ದೂರು ನೀಡಲು ಅಧ್ಯಕ್ಷೆಯೊಂದಿಗೆ ಹೋದ ಸಿಪಿಎಂ ಸದಸ್ಯನ ಪಕ್ಷ ವಂಚನೆ ವಿರುದ್ಧ ಪಂಚಾಯತ್ ಕಚೇರಿಗೆ ಮಾರ್ಚ್ ನಡೆಸುವುದು ಯಾರನ್ನು ಮೋಸಗೊಳಿಸುವ ಉದ್ದೇಶದಿಂದಾಗಿದೆ ಎಂದು ಅವರು ಪ್ರಶ್ನಿಸಿದರು. ಹಣಕಾಸು ವಂಚನೆ ಬಹಿರಂಗಗೊಂಡ ಬಳಿಕ ಕರೆದ ತುರ್ತು ಬೋರ್ಡ್ ಸಭೆಯಲ್ಲಿ ಇಬ್ಬರು ಸ್ಥಾಯಿ ಸಮಿತಿ ಅಧ್ಯಕ್ಷರು ಭಾಗವಹಿಸಿಲ್ಲ. ಅವರು ಆಡಳಿತ ಸಮಿತಿ ನಡೆಸುವ ಭ್ರಷ್ಟಾಚಾರಕ್ಕೆ ವಿರುದ್ಧವಾಗಿರುವುದಾಗಿ ಹೇಳಲಾಗುತ್ತಿದೆ. ಅನಂತರ ಅವರನ್ನು ಪಂಚಾಯತ್‌ನಲ್ಲಿ ಕಂಡು ಬಂದಿಲ್ಲ. ಅವರು ಕೂಡಾ ವಂಚನೆಯಲ್ಲಿ ಪಾಲ್ಗೊಂಡಲ್ಲಿ ಆಡಳಿತಕ್ಕೆ ನೇತೃತ್ವ ನೀಡುವವರು ಅದನ್ನು ತಿಳಿಸಬೇಕು. ಈ ಆಡಳಿತ ಸಮಿತಿಯ ಕಾಲಾವಧಿಯಲ್ಲಿ ನಡೆದ ಎಲ್ಲಾ ಆರ್ಥಿಕ ವ್ಯವಹಾರಗಳನ್ನು ವಿಜಿಲೆನ್ಸ್ ತನಿಖೆ ನಡೆಸಬೇಕು ಎಂದು ಅವರು ತಿಳಿಸಿದರು.