ಕುಂಬಳೆ ಪಂಚಾಯತ್ನಲ್ಲಿ ಹಣ ಅವ್ಯವಹಾರ: ಸಮಗ್ರ ತನಿಖೆಗೆ ಪಂ. ಅಧ್ಯಕ್ಷೆ ಆಗ್ರಹ; ಪಂ. ಆಡಳಿತ ಸಮಿತಿ ತುರ್ತು ಸಭೆ ಇಂದು
ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್ನಲ್ಲಿ ನಡೆದ ಆರ್ಥಿಕ ಅವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಪಟ್ಟಿದ್ದಾರೆ. ಈ ಬಗ್ಗೆ ತುರ್ತು ಆಡಳಿತ ಸಮಿತಿ ಸಭೆ ಇಂದು ಮಧ್ಯಾಹ್ನ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಕರ್ತವ್ಯ ನಿರ್ವಹಣೆಗೆ ನಿರಂತರವಾಗಿ ಗೈರು ಹಾಜರಾಗಿರುವುದರಿಂದ ಮೇ 16ರಂದು ಪಂಚಾಯತ್ ಆಡಳಿತ ಸಮಿತಿ ರಮೇಶ್ರನ್ನು ಅಮಾನತು ಗೊಳಿಸಿತ್ತು.
ಪಂಚಾಯತ್ನಲ್ಲಿ ಅವರ ಚಟುವಟಿಕೆ ಕಾಲಾವಧಿಯಾದ 2023 ಸೆಪ್ಟಂಬರ್ನಿಂದ 2024 ಮೇವರೆಗಿನ ಚಟುವಟಿಕೆ ಹಾಗೂ ವ್ಯವಹಾರಗಳನ್ನು ಪರಿಶೀಲಿಸಿದಾಗ ಆರ್ಥಿಕ ವಂಚನೆ ನಡೆಸಿರುವುದಾಗಿ ತಿಳಿದು ಬಂದಿದೆ. ಈ ವಿಷಯವನ್ನು ಕೂಡಲೇ ಪಂಚಾಯತ್ ಜೋಯಿಂಟ್ ಡೈರೆಕ್ಟರ್ಗೆ ತಿಳಿಸಲಾ ಗಿದೆ. ಕುಂಬಳೆ ಪೊಲೀಸರಿಗೂ ದೂರು ನೀಡಲಾಗಿದೆ. ಜೋಯಿಂಟ್ ಡೈರೆಕ್ಟರ್, ಕಚೇರಿಯ ಅಧಿಕಾರಿಗಳು ನಡೆಸಿದ ಪರಿಶೀಲನೆಯಲ್ಲಿ 11,04,959 ರೂ.ಗಳನ್ನು ಬ್ಯಾಂಕ್ ಖಾತೆಯಿಂದ ಸಂಬಂಧಿಕರ ಖಾತೆಗಳಿಗೆ ವರ್ಗಾವಣೆ ನಡೆಸಿರುವುದು ಪತ್ತೆಹಚ್ಚಲಾಗಿದೆ. ಆರ್ಥಿಕ ವ್ಯವಹಾರ ಪಂಚಾಯತ್ ಅಧ್ಯಕ್ಷರ ಲೋಗಿನ್ನಲ್ಲಿ ಇರಬೇಕೆಂಬ ವ್ಯವಸ್ಥೆ ಇದ್ದರೂ ಅದು ನಡೆದಿಲ್ಲ. ವಂಚನೆ ನಡೆಸಿ ಹಣ ಲಪಟಾಯಿಸ ಲಾಗಿದೆ.
ಈ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಶಾಸಕ ಎಕೆಎಂ ಅಶ್ರಫ್ ಮುಖಾಂತರ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಇಲಾಖೆ ಸಚಿವ ಎಂ.ಬಿ. ರಾಜೇಶ್ ಎಂಬಿವರಿಗೆ ದೂರು ನೀಡುವುದಾಗಿ ತಾಹಿರಾ ಯೂಸಫ್ ತಿಳಿಸಿದ್ದಾರೆ. ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ. ಸಬೂರ, ಬಿ.ಎ. ರಹ್ಮಾನ್ ಆರಿಕ್ಕಾಡಿ, ನಸೀಮಾ ಖಾಲಿದ್, ಯೂಸಫ್ ಉಳುವಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಕಚೇರಿಯಲ್ಲಿ ನಡೆದ ಹಣ ಅವ್ಯವಹಾರ ಹಾಗೂ ಆ ಬಗೆಗಿನ ತನಿಖೆಯ ಕುರಿತು ಕಾರವಲ್ ಮೀಡಿಯಾ ಮೊದಲು ವರದಿ ಮಾಡಿದೆ.