ಕುಂಬಳೆ ಪರಿಸರದಲ್ಲಿ ಹಂದಿಗಳ ಕಾಟ: ನಿದ್ದೆಗೆಡುತ್ತಿರುವ ಸ್ಥಳೀಯರು
ಕುಂಬಳೆ: ರಾತ್ರಿ ವೇಳೆಯಲ್ಲಿ ಜನವಾಸ ಕೇಂದ್ರಗಳಿಗೆ ಹಂದಿಗಳ ಹಿಂಡು ತಲುಪುತ್ತಿರುವುದು ಸ್ಥಳೀಯರಲ್ಲಿ ಭೀತಿ ಸೃಷ್ಟಿಸಿದೆ. ಮೊಗ್ರಾಲ್ ತಖ್ವನಗರದಲ್ಲೂ, ಮಿಲಾದ್ ನಗರದಲ್ಲಿ, ಬಂಬ್ರಾಣ, ಮೊಗ್ರಾಲ್ ಕೆ.ಕೆ. ಪುರಂಗಳಲ್ಲಿ ಹಂದಿಗಳು ಜನರಿಗೆ ಉಪಟಳ ನೀಡತೊಡಗಿವೆ ಎಂದು ಸ್ಥಳೀಯರು ದೂರುತ್ತಾರೆ. ಮನೆ ಹಿತ್ತಿಲಿಗೆ ನುಗ್ಗುವ ಹಂದಿಗಳು, ಬೆಳೆಸಿದ ತರಕಾರಿ, ಹೂ ಗಿಡಗಳನ್ನು ನಾಶಪಡಿಸುತ್ತಿದೆ. ಅಲ್ಲದೆ ರಾತ್ರಿ ಹೊತ್ತು ಇವು ಕೂಗುವ ಶಬ್ದದಿಂದ ನಿದ್ದೆಗೆಡಬೇಕಾಗುತ್ತಿದೆ ಎಂದು ಸ್ಥಳೀಯರು ತಿಳಿಸುತ್ತಾರೆ. ಮುಂಜಾನೆ ವೇಳೆ ಮಸೀದಿಗೆ ನಮಾಜಿಗೆಂದು ತೆರಳುವಾಗ ರಸ್ತೆಯಲ್ಲಿ ಹಂದಿಗಳ ಹಿಂಡು ಕಂಡು ಬರುತ್ತಿದೆ ಎಂದಿದ್ದಾರೆ.
ಮೊಗ್ರಾಲ್ ಪುತ್ತೂರಿನ ಕೆಲವು ಹೋಟೆಲ್‌ಗಳ ಹಿಂಬದಿಗಳಲ್ಲಿ ರಾಶಿ ಹಾಕಿರುವ ಆಹಾರ ಪದಾರ್ಥಗಳ ಅವಶಿಷ್ಟಗಳನ್ನು ತಿನ್ನಲು ಈ ಭಾಗಕ್ಕೆ ಹಂದಿಗಳ ಹಿಂಡು ಆಗಮಿಸುತ್ತಿದೆ ಎನ್ನಲಾಗಿದೆ. ಬಳಿಕ ಇಲ್ಲಿಂದ ಗ್ರಾಮ ಪ್ರದೇಶಗಳಿಗೆ ಹಂದಿಗಳು ಸಂಚರಿಸು ತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಉಂಟಾಗಲಿಲ್ಲ ವೆಂದು ಸ್ಥಳೀಯರು ದೂರುತ್ತಾರೆ. ಹಂದಿ ಭೀತಿಯಿಂದ ಜನರನ್ನು ರಕ್ಷಿಸಲು ಮೃಗ ಸಂರಕ್ಷಣೆ ಇಲಾಖೆ, ಕೃಷಿ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಮೊಗ್ರಾಲ್ ಮಿಲಾದ್ ನಗರ್ ಮಿಲಾದ್ ಸಮಿತಿ, ಯುವಜನ ಒಕ್ಕೂಟ ಆಗ್ರಹಿಸಿದೆ.