ಕುಂಬಳೆ ಪೇಟೆಯಲ್ಲಿ ಶುಚೀಕರಣ ನಾಮಮಾತ್ರ: ವಿವಿಧೆಡೆ ತ್ಯಾಜ್ಯಗಳದ್ದೇ ರಾಶಿ
ಕುಂಬಳೆ: ನಾಡಿನಾದ್ಯಂತ ಶುಚೀಕರಣ ನಡೆಯುತ್ತಿರುವಾಗ ಕುಂಬಳೆ ಪೇಟೆಯಲ್ಲಿ ಶುಚೀಕರಣ ಎಂಬುವುದು ಕೇವಲ ಹೇಳಿಕೆಗೆ ಮಾತ್ರವೇ ಸೀಮಿತವಾಗಿದೆ.
ಕುಂಬಳೆ ಪೇಟೆಯಲ್ಲಿ ಬದಿಯಡ್ಕ, ಪೆರ್ಲ ಭಾಗಗಳಿಗೆ ತೆರಳುವ ಪ್ರಯಾಣಿಕರು ಬಸ್‌ಗಾಗಿ ಕಾದು ನಿಲ್ಲುವ ಸ್ಥಳದಲ್ಲಿ ಇದೀಗ ತ್ಯಾಜ್ಯ ತುಂಬಿಕೊಂಡಿದ್ದು, ಅಸಹ್ಯ ಮೂಡಿಸುತ್ತಿದೆ. ವಿವಿಧ ಆಹಾರ ವಸ್ತುಗಳ ಹಾಗೂ ಪಾನ್ ಮಸಾಲೆಗಳ ಪ್ಯಾಕೆಟ್ ಸಹಿತ ಇಲ್ಲಿ ರಾಶಿ ಬಿದ್ದಿದೆ. ಮಳೆ ನೀರಿನೊಂದಿಗೆ ಬೆರೆತು ಕೊಳೆಯುತ್ತಿರುವ ಅವುಗಳನ್ನು ಮೆಟ್ಟಿಕೊಂಡು ಪ್ರಯಾಣಿಕರು ನಡೆದಾಡ ಬೇಕಾಗಿದೆ. ಇದೇ ಪರಿಸರ ದಲ್ಲಿ ಖಾಲಿ ಬಾಟ್ಲಿಗಳನ್ನು ಸಂಗ್ರಹಿಸಲೆಂದು ಬಾಟಲ್ ಬೂತ್ ಸ್ಥಾಪಿಸಲಾಗಿದೆ. ಅದರಲ್ಲಿ ಬಾಟ್ಲಿಗಳ ಬದಲು ತ್ಯಾಜ್ಯ ವಸ್ತು ಗಳನ್ನು ತುಂಬಿಸಿಡಲಾಗಿದೆ. ವಿವಿಧ ಅಗತ್ಯಗ ಳಿಗಾಗಿ ಪೇಟೆಗೆ ತಲುಪುವವರು ಈ ತ್ಯಾಜ್ಯಗಳ ದಶನ ಪಡೆದೇ ಮುಂದೆ ಸಾಗಬೇಕಾದ ಪರಿಸ್ಥಿತಿ ಉಂಟಾಗಿದೆ.
ಪೇಟೆಯಲ್ಲಿ ಬಿದ್ದು ಕೊಂಡಿರುವ ಪ್ಲಾಸ್ಟಿಕ್ ಸಹಿತ ವಿವಿಧ ತ್ಯಾಜ್ಯವನ್ನು ಹಸಿರು ಕ್ರಿಯಾ ಸೇನೆ ಕಾರ್ಯಕರ್ತರು ಸಾಮಾನ್ಯವಾಗಿ ತೆರವುಗೊಳಿಸು ತ್ತಿದ್ದಾರೆ. ಇತ್ತೀಚೆಗೆ ತೆರವುಗೊಳಿಸಿದ ಬಳಿಕ ಬಿದ್ದುಕೊಂಡ ತ್ಯಾಜ್ಯ ಇದೀಗ ಇಲ್ಲಿ ಕೊಳೆಯುತ್ತಿದೆ.
ಪಂಚಾಯತ್ ಅಧಿಕಾರಿಗಳು ಕೂಡಾ ಇದನ್ನೇ ನೋಡಿ ತಮ್ಮ ಕೆಲಸಗಳಿಗೆ ತೆರಳುತ್ತಿದ್ದರೂ ಪೇಟೆಯ ತ್ಯಾಜ್ಯ ತೆರವುಗೊಳಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂಬ ದೂರು ಕೇಳಿಬಂದಿದೆ.