ಕುಂಬಳೆ ಬೆಡಿ ಮಹೋತ್ಸವಕ್ಕಾಗಿ ಸಿದ್ಧಪಡಿಸಿದ್ದ ಸುಡುಮದ್ದು, ಪಟಾಕಿಗಳು ಪಾಲಕ್ಕಾಡ್‌ನಲ್ಲಿ ವಶ
ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜಾತ್ರೆಯ ಸಮಾರೋಪದ ಅಂಗವಾಗಿ ನಾಳೆ ನಡೆಯಬೇಕಿದ್ದ ಸುಡುಮದ್ದು ಮಹೋತ್ಸವಕ್ಕಾಗಿ ಸಿದ್ಧಪಡಿಸಿದ್ದ ಸುಡುಮದ್ದು ಹಾಗೂ ಪಟಾಕಿಗಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಗುತ್ತಿಗೆದಾರ ಚಾಲಕ್ಕುಡಿಯ ವಿ.ಸಿ. ವರ್ಗೀಸ್ ಈ ವಿಷಯವನ್ನು ಉತ್ಸವ ಸಮಿತಿ ಪದಾಧಿಕಾರಿಗಳಲ್ಲಿ ತಿಳಿಸಿದ್ದಾರೆ. 1070 ಕಿಲೋ ಸುಡುಮದ್ದು ಹಾಗೂ ಪಟಾಕಿಗಳನ್ನು ವಡಕಾಂಚೇರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. 800 ಕಿಲೋ ಪೊಟಾಶಿಯಂ ನೈಟ್ರೇಟ್, 200 ಕಿಲೋ ಅಲುಮಿನಿಯಂ ಪೌಡರ್, 18 ಕಿಲೋ ಸಲ್ಫರ್, 20,000 ಓಲೆ ಪಟಾಕಿ, 20 ಕಿಲೋ ಸುಡುಮದ್ದು, ಸುಡುಮದ್ದು ತುಂಬಿಸಿದ್ದ ಕೊಳವೆಗಳು ಮೊದಲಾದವುಗಳು ವಶಪಡಿಸಿಕೊಂಡವುಗಳಲ್ಲಿ ಒಳಗೊಂಡಿವೆ.
ಮಂಞಪ್ರಚಿರಕಾಡಾ ಬಯಲಿನಲ್ಲಿ ಹೊಳೆಗೆ ಹೊಂದಿಕೊಂಡಿರುವ ರಬ್ಬರ್ ತೋಟದ ಶೆಡ್‌ನಲ್ಲಿ ಇವುಗಳನ್ನು ಇರಿಸಲಾಗಿತ್ತು. ಕೆಲಸಗಾರರು ಪರಾರಿಯಾಗಿದ್ದಾರೆ. ವರ್ಗೀಸ್‌ರ ಹೆಸರಲ್ಲಿ ಐದು ಕಿಲೋ ಸುಡುಮದ್ದು ದಾಸ್ತಾನಿಡುವ ಲೈಸನ್ಸ್ ಮಾತ್ರವೇ ಇದೆಯೆಂದು ಆಲತ್ತೂರು ಡಿವೈಎಸ್ಪಿ ಸಿ.ಆರ್. ಸಂತೋಷ್ ತಿಳಿಸಿದ್ದಾರೆ. ಸುಡುಮದ್ದು ಸಂಗ್ರಹ ಪತ್ತೆಹಚ್ಚಿದ ಸ್ಥಳದಲ್ಲಿ ಕಾವಲು ಏರ್ಪಡಿಸಲಾಗಿದೆ. ಸುಡುಮದ್ದು ಹಾಗೂ ಸ್ಫೋಟಕ ವಸ್ತುಗಳನ್ನು ನಿಷ್ಕ್ರಿಯಗೊಳಿಸಲಿರುವ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.