ಕುಂಬಳೆ ಶಾಲೆ ಸಮೀಪ ಅಪಾಯಭೀತಿಯೊಡ್ಡುತ್ತಿದ್ದ ಕಟ್ಟಡಗಳು ನೆಲಸಮ: ಆತಂಕಕ್ಕೆ ಪರಿಹಾರ
ಕುಂಬಳೆ: ಕುಂಬಳೆಯಲ್ಲಿ ಶಾಲಾ ವಿದ್ಯಾರ್ಥಿಗಳ ಸಹಿತ ಸಾರ್ವಜ ನಿಕರಿಗೆ ಅಪಾಯಭೀತಿ ಯೊಡ್ಡುತ್ತಿದ್ದ ಎರಡು ಕಟ್ಟಡಗಳನ್ನು ಮುರಿದು ತೆಗೆಯಲಾಯಿತು. ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಸಮೀಪ ಯಾವುದೇ ಸಮಯದಲ್ಲಿ ಕುಸಿದು ಬಿದ್ದು ಅಪಾಯ ಸೃಷ್ಟಿಸಬಹುದಾಗಿದ್ದ ಎರಡು ಪಿಡಬ್ಲ್ಯುಡಿ ಕಟ್ಟಡಗಳನ್ನು ಮುರಿಯಲಾಯಿತು. ಶಾಲೆ ಸಮೀಪದಲ್ಲಿರುವ ಈ ಎರಡು ಕಟ್ಟಡಗಳಿಂದ ವಿದ್ಯಾರ್ಥಿಗಳಿಗೆ ಆತಂಕ ಸೃಷ್ಟಿಯಾಗಿರುವುದಾಗಿ ತಿಳಿಸಿ ಶಾಲಾ ಪಿಟಿಎ, ಅಧ್ಯಾಪಕರು, ನಾಗರಿಕರು ಹಾಗೂ ಇಲ್ಲಿನ ಲಕ್ಕಿಸ್ಟಾರ್ ಕ್ಲಬ್ ಸದಸ್ಯರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಎರಡು ದಶಕಗಳಿಂದ ಉಪ ಯೋಗಶೂನ್ಯವಾದ ಪಿಡಬ್ಲ್ಯುಡಿ ರೆಸ್ಟ್ ಹೌಸ್ ಹಾಗೂ ಅದಕ್ಕೆ ಸಂಬಂಧಪಟ್ಟ ಬೇರೊಂದು ಕಟ್ಟಡದಿಂದ ಅಪಾಯಭೀತಿ ಉಂಟಾಗಿತ್ತು 50 ವರ್ಷಕ್ಕಿಂತ ಹೆಚ್ಚು ಹಳಮೆಯ ಕಟ್ಟಡಗಳು ಇವಾಗಿದ್ದವು. ಈ ಹಿಂದೆ ಮಂತ್ರಿಗಳು ಸಹಿತ ಗಣ್ಯ ವ್ಯಕ್ತಿಗಳು ಕುಂಬಳೆ ಭಾಗಕ್ಕೆ ಬಂದರೆ ಈ ಕಟ್ಟಡಗಳಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಆದರೆ ಬಳಿಕ ಕಟ್ಟಡ ಉಪಯೋಗಶೂನ್ಯವಾಯಿತು. ೨೦೦೦ಕ್ಕೂ ಹೆಚ್ಚು ಮಕ್ಕಳು ಕಲಿಯುವ ಕುಂಬಳೆ ಹೈಯರ್ ಸೆಕೆಂಡರಿ ಶಾಲೆ, ಯುಪಿ ಶಾಲೆಯ ವಿದ್ಯಾರ್ಥಿಗಳು ಅಪಾಯಭೀ ತಿಯೊಡ್ಡುತ್ತಿದ್ದ ಈ ಕಟ್ಟಡಗಳ ಸಮೀಪದಲ್ಲಾಗಿ ನಡೆದು ಹೋಗುತ್ತಿದ್ದರು.
ಅಲ್ಲದೆ ವಿದ್ಯಾರ್ಥಿಗಳು ಆಟದ ಸಮಯದಲ್ಲಿ ಹಾಗೂ ವಿಶ್ರಾಂತಿ ವೇಳೆಗಳಲ್ಲಿ ಮೈದಾನ ಸಮೀಪದಲ್ಲೇ ಇದ್ದ ಈ ಕಟ್ಟಡಗಳ ಕೆಳಭಾಗದಲ್ಲಿ ನಿಲ್ಲುತ್ತಿದ್ದರು. ಈ ಶೈಕ್ಷಣಿಕ ವರ್ಷ ಆರಂಭಿಸುವ ಮೊದಲೇ ಈ ಕಟ್ಟಡಗಳನ್ನು ಮುರಿದು ತೆಗೆಯಬೇಕೆಂದು ಶಾಲಾ ಪಿಟಿಎ ಹಾಗೂ ನಾಗರಿಕರು ಒತ್ತಾಯಿಸಿದ್ದರು.