ಕುಂಬ್ಡಾಜೆ ಸ್ಮಾರ್ಟ್ ಗ್ರಾಮ ಕಚೇರಿಯಲ್ಲಿ ನೌಕರರ ಅಭಾವ: ಸಾರ್ವಜನಿಕರಿಗೆ ಸಮಸ್ಯೆ: ಪ್ರತಿಭಟನೆಯ ಮುನ್ನೆಚ್ಚರಿಕೆ ನೀಡಿದ ಬಿಜೆಪಿ
ಬದಿಯಡ್ಕ: ಸ್ಮಾರ್ಟ್ ಗ್ರಾಮ ಕಚೇರಿಯೆಂದು ಸರಕಾರ ಘೋಷಿಸಿದ ಕುಂಬ್ಡಾಜೆ ಗ್ರಾಮ ಕಚೇರಿಯಲ್ಲಿ ನೌಕರರ ಅಭಾವವುಂಟಾಗಿದ್ದು, ಇದರಿಂದ ವಿವಿಧ ಅಗತ್ಯಗಳಿಗಾಗಿ ಗ್ರಾಮ ಕಚೇರಿಗೆ ತಲುಪುವ ಸಾರ್ವಜನಿಕರು ಸಮಸ್ಯೆಗೀಡಾಗು ತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಸ್ಮಾರ್ಟ್ ಗ್ರಾಮ ಕಚೇರಿಯ ಉದ್ಘಾಟನೆ ನಡೆದು ಒಂದು ವರ್ಷವಾಗುವ ಮೊದಲೇ ಕಚೇರಿಯಲ್ಲಿ ಗ್ರಾಮಾಧಿಕಾರಿಯೇ ಇಲ್ಲದ ಸ್ಥಿತಿ ಉಂಟಾಗಿದೆ. ಇದುವರೆಗೆ ಇದ್ದ ಗ್ರಾಮಾಧಿಕಾರಿ ರಜೆಯಲ್ಲಿ ತೆರಳಿದ್ದಾರೆ. ಇದರಿಂದ ನೆಟ್ಟಣಿಗೆ ಗ್ರಾಮಾಧಿಕಾರಿಗೆ ಇಲ್ಲಿನ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.
ಕುಂಬ್ಡಾಜೆ ಗ್ರಾಮ ಕಚೇರಿ ಉಬ್ರಂಗಳ ಹಾಗೂ ಕುಂಬ್ಡಾಜೆ ಎಂಬ ಎರಡು ಗ್ರಾಮಗಳನ್ನು ಒಳಗೊಂಡಿದೆ. ಇಲ್ಲಿ ಗ್ರಾಮಾಧಿಕಾರಿ ಸೇರಿ ಆರು ಮಂದಿ ಸಿಬ್ಬಂದಿಗಳು ಇರಬೇಕಾಗಿದೆ. ಆದರೆ ಈಗ ಒಬ್ಬರೇ ಇದ್ದು ಇದರಿಂದ ಸಮಸ್ಯೆ ಉಂಟಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗೆ ಪಂಚಾಯತ್‌ನಲ್ಲಿ ಮನೆಗಳು ಮಂಜೂರಾಗಿದ್ದು, ಅದಕ್ಕೆ ಅಗತ್ಯವುಳ್ಳ ದಾಖಲೆಪತ್ರಗಳಿಗೆ ಅರ್ಜಿದಾರರು ಪರದಾಡಬೇಕಾದ ಸ್ಥಿತಿ ಉಂಟಾಗಿದೆ. ಆದ್ದರಿಂದ ಸಮಸ್ಯೆಗೆ ಶೀಘ್ರ ಪರಿಹಾರ ಕ್ರಮ ಕಾಣಬೇಕೆಂದು ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ಒತ್ತಾಯಿಸಿದೆ. ಗ್ರಾಮ ಕಚೇರಿಯಲ್ಲಿ ಗ್ರಾಮಾಧಿಕಾರಿ, ವಿಲ್ಲೇಜ್ ಅಸಿಸ್ಟೆಂಟ್, ಇಬ್ಬರು ಫೀಲ್ಡ್ ಆಫೀಸರ್‌ಗಳ ಹುದ್ದೆ ಖಾಲಿಯಿದೆ. ಈ ಹುದ್ದೆಗಳಿಗೆ ಕೂಡಲೇ ನೇಮಕಾತಿ ನಡೆಸಬೇಕು, ಇಲ್ಲದಿದ್ದಲ್ಲಿ ಬಿಜೆಪಿ ಪಂಚಾಯತ್ ಸಮಿತಿ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಪಕ್ಷದ ಪಂಚಾಯತ್ ಪ್ರಧಾನ ಕಾರ್ಯದರ್ಶಿ ಶಶಿಧರ ತೆಕ್ಕೆಮೂಲೆ ತಿಳಿಸಿದ್ದಾರೆ.