ಕುಖ್ಯಾತ ಆರೋಪಿ ಕಾರಾಟ್ ನೌಶಾದ್ ಸೆರೆ: ಪರಾರಿಯಾಗಲೆತ್ನಿಸಿದಾಗ ಬೆನ್ನಟ್ಟಿದ ಪೊಲೀಸರು
ಕಾಸರಗೋಡು: ಕಾಸರಗೋಡು- ಕಣ್ಣೂರು, ಕರ್ನಾಟಕ ಸಹಿತ ನೂರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿ ವಾರೆಂಟ್‌ನಲ್ಲಿದ್ದ ಕುಖ್ಯಾತ ಕಳ್ಳ ಕಾರಾಟ್ ನೌಶಾದ್ (54)ನನ್ನು ಪೊಲೀಸರು ನಿನ್ನೆ ಸೆರೆ ಹಿಡಿದಿದ್ದಾರೆ. ಮಂಗಳೂರಿನಲ್ಲಿ ವಾಸವಿದ್ದ ಈತ ಕಾಞಂಗಾಡ್‌ಗೆ ಕಳವಿಗಾಗಿ ತಲುಪುತ್ತಿದ್ದಾನೆ ಎಂಬ ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಸಿಐ ಅಜಿತ್ ಕುಮಾರ್ ನೇತೃತ್ವದ ತಂಡ ರೈಲು ನಿಲ್ದಾಣದಲ್ಲಿ ಹೊಂಚು ಹಾಕಿದ್ದರು. ಕಳೆದ ಎರಡು ದಿನಗಳಿಂದ ಈತನಿಗಾಗಿ ಕಾಯುತ್ತಿದ್ದ ಮಧ್ಯೆ ಈತ ನಿನ್ನೆ ರಾತ್ರಿ ವೆಸ್ಟ್‌ಕೋಸ್ಟ್ ರೈಲಿನಲ್ಲಿ ಬಂದಿಳಿದಿದ್ದನು. ಕೂಡಲೇ ಪೊಲೀಸರು ಆತನನ್ನು ಸೆರೆ ಹಿಡಿಯಲು ಹೋದಾಗ ಅಲ್ಲಿಂದ ತಪ್ಪಿಸಿ ಪರಾರಿಯಾಗಿದ್ದನು.
ಆದರೆ ಪೊಲೀಸರು ಬೆನ್ನಟ್ಟಿ ಹೊಕೈ ನಡೆಸಿ ಸೆರೆ ಹಿಡಿದಿದ್ದು, ಈ ವೇಳೆ ಆತ ತನ್ನ ಕೈಯಲ್ಲಿದ್ದ ಬ್ಲೇಡ್‌ನಿಂದ ತನ್ನ ತುಟಿಯನ್ನು ಗೀರಿಕೊಂಡಿದ್ದಾನೆ. ಎಂದೂ ತನ್ನ ಕೈಯಲ್ಲಿ ಬ್ಲೇಡನ್ನಿರಿಸುತ್ತಿದ್ದ ಈತ ತನ್ನನ್ನು ಎದುರಿಸಲು ಬಂದವರ ವಿರುದ್ಧ ಬ್ಲೇಡ್‌ನಿಂದ ಆಕ್ರಮಣ ನಡೆಸುವುದು ಇವನ ಹವ್ಯಾಸವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಈತನನ್ನು ಹಿಡಿಯಲು ಪೊಲೀಸರು ಶತಪ್ರಯತ್ನ ನಡೆಸಿದ್ದು, ಈಗ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.