ಕುಡಿಯಲು ನೀರಿಲ್ಲದ ವೇಳೆ ಪೋಲು: ವಿದ್ಯಾನಗರದಲ್ಲಿ ರಸ್ತೆಯಲ್ಲಿ ಹರಿಯುತ್ತಿದೆ ನೀರು
ಕಾಸರಗೋಡು: ಬೇಸಿಗೆಯ ಬಿಸಿ ಹೆಚ್ಚುತ್ತಿರುವ ಮಧ್ಯೆ ವಿವಿಧ ಕಡೆಗಳಲ್ಲಿ ಕುಡಿಯುವ ನೀರಿಗೆ ಕ್ಷಾಮ ತಲೆದೋರುತ್ತಿದೆ. ಈ ಮಧ್ಯೆ ಕುಡಿಯಲು ಲಭಿಸಬೇಕಾಗಿದ್ದ ನೀರು ವ್ಯಾಪಕವಾಗಿ ರಸ್ತೆಯಲ್ಲಿ ಹರಿದು ಪೋಲಾಗುತ್ತಿದೆ. ವಿದ್ಯಾನಗರ ಬಿಸಿ ರೋಡ್ ಡಿಸಿಸಿ ಕಚೇರಿಯ ಮುಂಭಾಗ ಸರ್ವೀಸ್ ರಸ್ತೆಯಲ್ಲಿ ಕಳೆದ ಕೆಲವು ದಿನಗಳಿಂದ ನೀರು ಹರಿಯುತ್ತಿದೆ. ಇಲ್ಲಿ ಒಂದು ಕಡೆ ನೀರು ಪೋಲಾಗುತ್ತಿದ್ದುದನ್ನು ಕಂಡು ಹಲವು ದಿನಗಳ ಬಳಿಕ ಅಧಿಕಾರಿಗಳು ದುರಸ್ತಿ ನಡೆಸಿದ್ದಾರೆ. ಆದರೆ ಇಂದು ಮತ್ತೆ ಇನ್ನೊಂದು ಕಡೆ ಪೈಪ್ನಿಂದ ನೀರು ಹೊರ ಹರಿಯುತ್ತಿದೆ. ಇದು ಸರ್ವೀಸ್ ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದಾಗಿ ವಾಹನಗಳು ರಸ್ತೆಯಲ್ಲಿ ಸಂಚರಿಸುವಾಗ ಕಾಲುದಾರಿಯಲ್ಲಿ ಸಂಚರಿಸುವವರಿಗೆ ಅಭಿಷೇಕವಾಗುತ್ತಿದೆ. ಕುಡಿಯಲು ನೀರಿಲ್ಲದ ಈ ಕಾಲದಲ್ಲಿ ಈ ರೀತಿ ನೀರು ಪೋಲಾಗುತ್ತಿರುವುದಕ್ಕೆ ಜನಸಾಮಾನ್ಯರು ರೋಷ ವ್ಯಕ್ತಪಡಿಸುತ್ತಿದ್ದಾರೆ.