ಕುಸಿದ ಚರಂಡಿಯ ಸ್ಲ್ಯಾಬ್ ದುರಸ್ತಿಯಿಲ್ಲ: ಹಲವರು ಬಿದ್ದು ಗಾಯ
ಕುಂಬಳೆ: ದಿನಂಪ್ರತಿ ನೂರಾರು ಮಂದಿ ತಲುಪುವ ಕುಂಬಳೆ ಪೇಟೆಯಲ್ಲಿ ರಸ್ತೆ ಬದಿಯ ಚರಂಡಿಯ ಸ್ಲ್ಯಾಬ್ ಕುಸಿದು ಬಿದ್ದು ಎರಡು ವಾರಗಳು ಕಳೆದರೂ ಅದರ ದುರಸ್ತಿ ನಡೆದಿಲ್ಲ. ಈಗಾಗಲೇ ಹಲವು ಮಂದಿ ಚರಂಡಿಗೆ ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಕುಂಬಳೆ ಪೇಟೆಯ ಮೀನು ಮಾರುಕಟ್ಟೆ ಬಳಿಯ ರಸ್ತೆಯ ಚರಂಡಿ ಸ್ಲ್ಯಾಬ್ ಎರಡು ವಾರಗಳ ಹಿಂದೆ ಕುಸಿದಿದೆ. ದಿನಂಪ್ರತಿ ಪೇಟೆಗೆ ತಲುಪುವ ನೂರಾರು ಮಂದಿ ನಡೆದು ಹೋಗುವ ರಸ್ತೆಯ ಸ್ಲ್ಯಾಬ್ ಇದಾಗಿದ್ದು, ಇಲ್ಲಿ ಸ್ಲ್ಯಾಬ್ ಕುಸಿದಿರುವುದು ತಿಳಿಯದೇ ಹಲವರು ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ಪಂಚಾಯತ್ ಅಧಿಕಾರಿಗಳಿಗೆ ಸಾರ್ವಜನಿಕರು ಹಲವು ಬಾರಿ ತಿಳಿಸಿದರೂ ದುರಸ್ತಿಗೆ ಯಾವುದೇ ಕ್ರಮ ಉಂಟಾಗಿಲ್ಲವೆಂದು ದೂರಲಾಗಿದೆ.