ಕೃಷಿಕರು ನೀರಿಗಾಗಿ ಪರದಾಡುತ್ತಿರುವಾಗಲೇ ಬತ್ತಿದ ಅಂಗಡಿಮೊಗರು ಹೊಳೆ
ಕುಂಬಳೆ: ಜಿಲ್ಲೆಯ ಪ್ರಧಾನ ಹೊಳೆಗಳಲ್ಲೊಂದಾದ ಪುತ್ತಿಗೆ ಅಂಗಡಿಮೊಗರು ಹೊಳೆ ಬತ್ತಿ ಬರಡಾಗಿದ್ದು, ಇದರಿಂದ ಕೃಷಿಕರು ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ. ಇದೇ ಹೊಳೆಯಿಂದ ನೀರು ಬಳಸಿ ಕೃಷಿ ನಡೆಸುವವರು ಇದೀ ಗ ಸಂಕಷ್ಟಕ್ಕೊಳಗಾಗಿದ್ದು ಮುಂ ದೇನು ಎಂದು ತಿಳಿಯದೆ ಸಂದಿಗ್ಧತೆಯಲ್ಲಿದ್ದಾರೆ.
ಹೊಳೆಯಲ್ಲಿ ಕೃಷಿಕರು ತೋಡಿದ ಬಾವಿಗಳಲ್ಲೂ ಇದೀಗ ನೀರು ಇಲ್ಲದಾಗಿದೆ. ಈ ಹಿಂದಿನ ಬೇಸಿಗೆಕಾಲದಲ್ಲಿ ಈ ಬಾವಿಗಳಿಂದ ಕುಡಿಯಲು ನೀರು ಬಳಸುತ್ತಿದ್ದರು. ಆದರೆ ಈ ವರ್ಷ ಈ ಬಾವಿಗಳು ಬತ್ತಿಹೋಗಿ ತಿಂಗಳಾಯಿತು. ಸಾಮಾನ್ಯವಾಗಿ ಗುಡ್ಡೆ ಪ್ರದೇಶಗಳ ಕೆಳಭಾಗದಲ್ಲಿ ಸಾಗುವ ಹೊಳೆಗಳಲ್ಲಿ ಬೇಸಿಗೆ ಕೊನೆವರೆಗೆ ಸಾಮಾನ್ಯವಾಗಿ ನೀರು ಅಲ್ಲಲ್ಲಿ ತುಂಬಿಕೊಂಡಿರುತ್ತಿತ್ತು. ಆದರೆ ಈ ಬಾರಿ ಎಲ್ಲಿಯೂ ನೀರಿಲ್ಲದೆ ಮೈದಾನದಂತೆ ಗೋಚರಿಸುತ್ತಿದೆ. ಒಂದೆಡೆ ಗುಡ್ಡೆಗಳನ್ನು ನಾಶ ಗೊಳಿಸುತ್ತಿರುವುದು, ಮತ್ತೊಂದೆಡೆ ಹೊಳೆಗಳಿಂದ ವ್ಯಾಪಕವಾಗಿ ಹೊಯ್ಗೆ ಸಂಗ್ರಹಿಸಿದ ಪರಿಣಾಮ ಹೊಳೆಗಳಲ್ಲಿ ನೀರು ಬತ್ತಿ ಹೋಗಲು ಕಾರಣವೆಂದು ಕೃಷಿಕರು ತಿಳಿಸುತ್ತಿದ್ದಾರೆ.
ಇದೇ ಹೊಳೆಯಲ್ಲಿ ಮಳೆಗಾಲದಲ್ಲಿ ನೀರು ಉಕ್ಕಿ ಹರಿದು ಸಮೀಪದ ಬಯಲು ಪ್ರದೇಶಗಳು ಜಲಾವೃತಗೊಂಡು ಕೃಷಿ ನಾಶಗೊಳ್ಳುವುದೂ ಇದೆ. ಇದೇ ವೇಳೆ ನೀರು ಅಮೂಲ್ಯವೆಂದೂ ಅದನ್ನು ಸಂರಕ್ಷಿಸಬೇಕೆಂದು ತಿಳಿಸಿ ಸರಕಾರ ಭಾರೀ ಮೊತ್ತ ವ್ಯಯಿಸುತ್ತಿದ್ದರೂ ಅವು ಯಾವುದೂ ಫಲ ಪ್ರದವಾಗುತ್ತಿಲ್ಲ.