ಕೆಎಸ್‌ಆರ್‌ಟಿಸಿ ಬಸ್ ಶಾಲಾ ಬಸ್‌ಗೆ ಢಿಕ್ಕಿ: ವಿದ್ಯಾರ್ಥಿಗಳು ಸೇರಿ ಏಳು ಮಂದಿಗೆ ಗಾಯ
ಕಾಸರಗೋಡು: ಕೆಎಸ್‌ಆರ್‌ಟಿಸಿ ಬಸ್ ಶಾಲಾ ಬಸ್ಸಿಗೆ ಢಿಕ್ಕಿ ಹೊಡೆದು ವಿದ್ಯಾರ್ಥಿಗಳೂ ಸೇರಿ ಏಳು ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಮೈಲಾಟಿ ಬಸ್ ತಂಗುದಾಣದ ಬಳಿ ನಿನ್ನೆ ಸಂಜೆ ನಡೆದಿದೆ.
ಶಾಲಾ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಚಟ್ಟಂಟಾಲ್ ಹೈಯರ್ ಸೆಕೆಂಡರಿ ತರಗತಿ ವಿದ್ಯಾರ್ಥಿಗಳಾದ ಪನಯಾಲ್‌ನ ದರ್ಶನ್ ಚಂದ್ರನ್, ಕೆ. ದೇವಾಂಗ್, ಕುಣಿಯಾದ ಅಲ್-ಅಮೀನ್, ೯ನೇ ತರಗತಿ ವಿದ್ಯಾರ್ಥಿನಿ ಕಣಿಯಾದ ಫಿದಾ ಶೆರೀನ್, ಅರೆಬಿಕ್ ಅಧ್ಯಾಪಿಕೆ ಮರಿಯಾಂಬಿ (೩೨), ಮತ್ತು ಕೆಎಸ್‌ಆರ್‌ಟಿಸಿ ಬಸ್ಸಿನ ಇಬ್ಬರು ಪ್ರಯಾಣಿಕರು ಈ ಅಪಘಾದಲ್ಲಿ ಗಾಯಗೊಂಡಿದ್ದಾರೆ. ಇವರನ್ನು ಚೆಂಗಳ ಸಹಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಯಾರ ಗಾಯವೂ ಗಂಭೀರವಾದುದಲ್ಲವೆಂದು ವೈದ್ಯರು ತಿಳಿಸಿದ್ದಾರೆ.
ಢಿಕ್ಕಿಯ ಆಘಾತದಲ್ಲಿ ಶಾಲಾ ಬಸ್ ಮತ್ತು ಕೆಎಸ್‌ಆರ್‌ಟಿಸಿ ಬಸ್‌ನ ಹಿಂದುಗಡೆಯ ಒಂದು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಣ್ಣೂರು ಭಾಗದಿಂದ ಅಮಿತ ವೇಗದಲ್ಲಿ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ವಿದ್ಯಾರ್ಥಿಗಳನ್ನು ಇಳಿಸಲೆಂದು ಬಸ್ ತಂಗುದಾಣ ಬಳಿ ನಿಲ್ಲಿಸಲಾಗಿದ್ದ ಶಾಲಾ ಬಸ್ಸಿನ ಹಿಂದುಗಡೆ ಢಿಕ್ಕಿ ಹೊಡೆದು ಈ ಅಪಘಾತ ನಡೆದಿದೆ. ಆದರೆ ಸಂಭಾವ್ಯ ದೊಡ್ಡ ದುರಂತ ಅದೃಷ್ಟವಶಾತ್ ತಪ್ಪಿಹೋಗಿದೆ. ಶಾಲಾ ಬಸ್ಸಿನಲ್ಲಿ ೨೫ ವಿದ್ಯಾರ್ಥಿಗಳು ಮತ್ತು ಅಧ್ಯಾಪಿಕೆ ಇದ್ದರು. ಢಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್ಸಿನ ಹಿಂದಿನ ಭಾಗದಿಂದ ಖಾಸಗಿ ಬಸ್ಸೊಂದು ಬರುತ್ತಿತ್ತೆಂದೂ, ಆ ಬಸ್ಸು ತಮ್ಮ ಬಸ್ಸನ್ನು ದಾಟಿ ಮುಂದಕ್ಕೆ ಸಾಗದಿರಲು, ಕೆಎಸ್‌ಆರ್‌ಟಿಸಿ ಬಸ್ಸನ್ನು ಅಮಿತ ವೇಗದಲ್ಲಿ ಚಲಾಯಿಸಿರುವುದೇ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ದೂರಲಾಗಿದೆ. ಢಿಕ್ಕಿ ಹೊಡೆದ ಎರಡು ಬಸ್‌ಗಳು ಮತ್ತು ಅದರ ಹಿಂದುಗಡೆ ಬರುತ್ತಿದ್ದ ಖಾಸಗಿ ಬಸ್ಸನ್ನು ಮೇಲ್ಪರಂಬ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅಪಘಾತದ ಬಗ್ಗೆ ಶಾಲಾ ಬಸ್ಸು ಚಾಲಕ ಪಾಂಡಿ ಕಾಟ್ಟಿಪ್ಪಾರದ ಎಂ. ಅಶೋಕನ್ ನೀಡಿದ ದೂರಿನಂತೆ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ವಿರುದ್ಧ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.