ಕೆಲಸಕ್ಕಿದ್ದ ಮನೆಯಿಂದ ನಗ-ನಗದು ಕಳವು: ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಸೆರೆ
ಮಂಜೇಶ್ವರ: ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲಸಕ್ಕಿದ್ದ ಮನೆಯಿಂದ ನಗ-ನಗದು ಕಳವು ನಡೆಸಿ ಕಳೆದ ಒಂದೂವರೆ ತಿಂಗಳಿಂದ ತಲೆಮರೆಸಿಕೊಂಡಿದ್ದ ಮಂಜೇಶ್ವರ ನಿವಾಸಿ ಸಹಿತ ಇಬ್ಬರನ್ನು ಪೊಲೀಸರು ಸೆರೆಹಿಡಿದಿದ್ದಾರೆ.
ಮಂಜೇಶ್ವರ ಮೂಲದ ಅಶ್ರಫ್ ಅಲಿ ಹಾಗೂ ಬೆಂಗ್ರೆಯ ಕಬೀರ್ ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಫರಂಗಿಪೇಟೆಯ ಕೋಡಿಮಜಲು ನಿವಾಸಿಯೂ ಬಿಲ್ಡರ್ಸ್ ಮಾಲಕನಾದ ಮೊಹಮ್ಮದ್ ಜಫಾದುಲ್ಲ ಎಂಬವರ ಮನೆಯಿಂದ ಕಳವು ನಡೆಸಿದ ಸಂಬಂಧ ಈ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳು ಮೊಹಮ್ಮದ್ ಜಫಾದುಲ್ಲಾರ ಮನೆಯಿಂದ ೨೭.೫೦ ಲಕ್ಷ ರಪಾಯಿ ಮೌಲ್ಯದ ನಗದು ಹಾಗೂ ೪.೯೬ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ನಡೆಸಿದ್ದಾರೆಂದು ದೂರಲಾಗಿದೆ. ಅಶ್ರಫ್ ಅಲಿ ಹಲವು ತಿಂಗಳಿಂದ ಮೊಹಮ್ಮದ್ ಜಫಾದುಲ್ಲಾರ ಮನೆಯಲ್ಲಿ ಕೆಲಸಕ್ಕಿದ್ದು, ಮನೆ ಮಂದಿಯ ವಿಶ್ವಾಸ ಗಳಿಸಿಕೊಂಡಿದ್ದಾರೆನ್ನಲಾಗಿದೆ.
ಕಳೆದ ಅಕ್ಟೋಬರ್ ೧೮ರಂದು ಮೊಹಮ್ಮದ್ ಜಫಾದುಲ್ಲ ಮಂಗಳೂರು ಜೆಪ್ಪುನಲ್ಲಿರುವ ಸಹೋದರನ ಮನೆಗೆ ಕುಟುಂಬ ಸಮೇತ ತೆರಳಿದ್ದರು. ಈ ವೇಳೆ ಮನೆಯ ಕೀಲಿಕೈಯನ್ನು ಅಶ್ರಫ್ ಅಲಿಯ ಕೈಯಲ್ಲಿ ನೀಡಿದ್ದರು. ಆದರೆ ೧೯ರಂದು ಅಶ್ರಫ್ ಅಲಿಗೆ ಫೋನ್ ಕರೆಮಾಡಿದರೂ ತೆಗೆಯಲಿಲ್ಲವೆನ್ನಲಾಗಿದೆ. ಅನಂತರ ತುರ್ತು ಅಗತ್ಯಕ್ಕಾಗಿ ಬೆಂಗಳೂರಿಗೆ ತೆರಳಿದ ಜಫಾದುಲ್ಲ ೨೩ರಂದು ರಾತ್ರಿ ಮನೆಗೆ ತಲುಪಿ ನೋಡಿದಾಗ ಕೆಲಸದಾಳು ನಾಪತ್ತೆಯಾಗಿದ್ದರು. ಇದರಿಂದ ಸಂಶಯಗೊಂಡು ಒಳಗೆ ಹೋಗಿ ಪರಿಶೀಲಿಸಿದಾಗ ಕಪಾಟಿನಲ್ಲಿದ್ದ ನಗ-ನಗದು ಕಳವಿಗೀಡಾಗಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಬಂಟ್ವಾಳ ಪೊಲೀಸರು ಕೇಸು ದಾಖಲಿಸಿ, ತನಿಖೆ ನಡೆಸಿ ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.