ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ತಡೆದು ನಿಲ್ಲಿಸಿ ಹಾನಿ : ನರಹತ್ಯಾ ಯತ್ನ ಪ್ರಕರಣ ದಾಖಲಿಸಿ ಮೂವರ ಸೆರೆ
ಕಾಸರಗೋಡು: ನಿಲುಗಡೆಗೊಳಿಸುವಂತೆ ಕೈ ತೋರಿಸಿದರೂ ನಿಲ್ಲಿಸದೆ ಮುಂದಕ್ಕೆ ಸಾಗಿದ ಕೆಎಸ್‌ಆರ್‌ಟಿಸಿ ಮಿಂಚಿನ ಸೇವೆಯ ಬಸ್ಸನ್ನು ಹಿಂಬಾಲಿಸಿ, ಅದನ್ನು ತಡೆದು ನಿಲ್ಲಿಸಿ ಹಾನಿಗೊಳಿಸಿದ ದೂರಿನಂತೆ ನೀಲೇಶ್ವರ ಪೊಲೀಸರು ನರಹತ್ಯಾಯತ್ನ ಪ್ರಕರಣ ದಾಖಲಿಸಿ ಅದರಂತೆ ಮೂವರನ್ನು ಬಂಧಿಸಿದ್ದಾರೆ. ಮೊನ್ನೆ ರಾತ್ರಿ ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಸೇವೆ ಆರಂಭಿಸಿದ ಕಾಸರಗೋಡು- ಕೋಟಯಂ ರೂಟಿನ ಕೆಎಸ್‌ಆರ್‌ಟಿಸಿಯ ಮಿಂಚಿನ ಸೇವಾ ಬಸ್ ಹೊಸದುರ್ಗ ಸೌತ್‌ಗೆ ತಲುಪಿದಾಗ ಅದನ್ನು ನಿಲ್ಲಿಸುವಂತೆ ಕೆಲವರು ಕೈಸನ್ನೆ ತೋರಿಸಿದರು. ಆದರೆ ಬಸ್ ನಿಲ್ಲದೆ ಮುಂದಕ್ಕೆ ಸಾಗಿದೆ. ಆಗ ಆ ಬಸ್ಸನ್ನು ತಂಡವೊಂದು ಕಾರಿನಲ್ಲಿ ಹಿಂಬಾಲಿಸಿ ತಂಡವೊದು ನೀಲೇಶ್ವರ ಮಾರ್ಕೆಟ್ ಜಂಕ್ಷನ್‌ನಲ್ಲಿ ತಡೆದು ನಿಲ್ಲಿಸಿ ಬಸ್ಸಿಗೆ ಹಾನಿಗೊಳಿಸಿ, ಆ ಬಸ್ಸಿನ ಚಾಲಕನ ಮೇಲೆ ಹಲ್ಲೆ ನಡೆಸಲೆತ್ನಿಸಿರುವುದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಅದಕ್ಕೆ ಸಂಬಂಧಿಸಿ ನೀಲೇಶ್ವರ ಪೊಲೀಸರು ರಾಮನ್‌ತಳಿಯ ಎಟ್ಟುಕುಳದ ಹಂಸ ಮುಟ್ಟುವನ್ (೧೯), ಕುನ್ನುಂಗೈಯ ದೀಪಕ್ ದಿನೇಶನ್ (೨೩) ಮತ್ತು ವೆಸ್ಟ್ ಎಳೇರಿ ಕೂಟ್ಟೂರತ್ ಹೌಸ್‌ನ ಕೆ.ಆರ್. ಪ್ರವೀಣ್ (೨೩) ಎಂಬವರ ವಿರುದ್ಧ ನರಹತ್ಯಾಯತ್ನ ಮತ್ತಿತರ ಸೆಕ್ಷನ್‌ಗಳ ಪ್ರಕಾರ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿದ್ದಾರೆ.
ಬಸ್ಸನ್ನು ಹಿಂಬಾಲಿಸಲು ಆರೋಪಿಗಳು ಉಪಯೋಗಿಸಿದ ಕಾರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳು ಆ ವೇಳೆ ಮದ್ಯದ ಅಮಲಿನಲ್ಲಿದ್ದರು. ಅದರಿಂದಾಗಿ ಅವರನ್ನು ಅಲ್ಲಿನ ತಾಲೂಕು ಆಸ್ಪತ್ರೆಗೆ ಸಾಗಿಸಿ ಅಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿದ ಬಳಿಕವಷ್ಟೇ ಅವರನ್ನು ಬಂಧಿಸಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.
ನಮ್ಮದು ಮಿಂಚಿನ ಸೇವೆ ನಡೆಸುತ್ತಿರುವ ಬಸ್ ಆಗಿದೆ. ಆದ್ದರಿಂದ ಇದಕ್ಕೆ ನಿಗದಿತ ಕೇಂದ್ರಗಳಲ್ಲಿ ಮಾತ್ರವೇ ನಿಲುಗಡೆ ನೀಡಲಾಗುತ್ತಿದೆ. ಆರೋಪಿಗಳು ನಿಲ್ಲಿಸುವಂತೆ ಕೈ ಸನ್ನೆ ತೋರಿದ ಸ್ಥಳದಲ್ಲಿ ನಿಲುಗಡೆ ಇರಲಿಲ್ಲ. ಆದ್ದರಿಂದ ಬಸ್ಸನ್ನು ಅಲ್ಲಿ ನಿಲ್ಲಿಸಲಿಲ್ಲವೆಂದು ಆ ಬಸ್‌ನ ಚಾಲಕ ಮತ್ತು ನಿರ್ವಾಹಕರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.