ಕೇರಳದಲ್ಲಿ ಎಡರಂಗ ಮತ್ತು ಬಿಜೆಪಿ ಮಧ್ಯೆ ಅನೈತಿಕ ಮೈತ್ರಿ-ಡಿ.ಕೆ. ಶಿವಕುಮಾರ್
ಪೆರಿಯ: ಕೇರಳ ರಾಜಕೀಯದಲ್ಲಿ ಸಿಪಿಎಂ ಮತ್ತು ಬಿಜೆಪಿ ನಡುವೆ ಅನೈತಿಕ ಮೈತ್ರಿ ಏರ್ಪಟ್ಟಿದೆ ಎಂದೂ, ಕೇರಳ ವಿಧಾನಸಭೆಗೆ ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಈ ಅನೈತಿಕ ಮೈತ್ರಿಯನ್ನು ಜನರು ತಿರಸ್ಕರಿಸಿ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನ್ನು ಅಧಿಕಾರಕ್ಕೇರಿಸಲಿದ್ದಾರೆಂದು ಕಾಂಗ್ರೆಸ್‌ನ ಕರ್ನಾಟಕ ರಾಜ್ಯ ಅಧಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಪೆರಿಯ ಕಲ್ಯೋಟ್‌ನಲ್ಲಿ ಕೊಲೆಗೈಯ್ಯಲ್ಪಟ್ಟ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್‌ಲಾಲ್‌ರ ಆರನೇ ಸಂಸ್ಮರಣಾ ಕಾರ್ಯಕ್ರಮವನ್ನು ನಿನ್ನೆ ಕಲ್ಯೋಟ್‌ನಲ್ಲಿ ಉದ್ಘಾಟಿಸಿ ಶಿವಕುಮಾರ್ ಮಾತನಾಡುತ್ತಿದ್ದರು. ಯಾರಿಗೂ ನಂಬಲು ಸಾಧ್ಯವಾಗದ ರೀತಿಯಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್‌ರನ್ನು ಸಿಪಿಎಂನವರು ಅತೀ ಪೈಶಾಚಿಕ ರೀತಿಯಲ್ಲಿ ಕಗ್ಗೊಲೆಗೈದಿದ್ದಾರೆ. ಆದರೆ ಕಾನೂನು ವ್ಯಾಪ್ತಿಯಿಂದ ಯಾರಿಗೂ ನುಣುಚಿಕೊಳ್ಳಲು ಸಾಧ್ಯವಾಗದು. ಈ ಅವಳಿ ಕಗ್ಗೊಲೆ ಇಡೀ ಪ್ರಜಾತಂತ್ರಕ್ಕೆ ಅಪಮಾನವಾಗಿದೆ. ಕೃಪೇಶ್ ಮತ್ತು ಶರತ್‌ಲಾಲ್ ಕಾಂಗ್ರೆಸ್‌ಗಾಗಿ ಪ್ರಾಣ ತ್ಯಾಗಮಾಡಿದ್ದಾರೆ. ಆದ್ದರಿಂದ ಅವರ ತ್ಯಾಗ ಸುಮ್ಮಗಾಗದು. ಇದು ಕಾಂಗ್ರೆಸ್‌ನ ಮುಂದಿನ ಪ್ರಯಾಣಕ್ಕೆ ಇನ್ನಷ್ಟು ಶಕ್ತಿ ನೀಡಲಿದೆಯೆಂದೂ ಅವರು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ಮುಖ್ಯ ಭಾಷಣಗಾ ರರಾಗಿ ಮಾತನಾಡಿದರು. ಸಂಘಾಟಕ ಸಮಿತಿ ಅಧ್ಯಕ್ಷ, ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸಿದರು. ಕಾಂಗ್ರೆಸ್‌ನ ಕರ್ನಾಟಕ ರಾಜ್ಯ ಕಾರ್ಯನಿರ್ವಹಣಾ ಅಧಕ್ಷ ಮಂಜುನಾಥ ಭಂಡಾರಿ, ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ, ಶಾಸಕ ರಾಹುಲ್ ಮಾಕೂಟ್ಟತ್ತಿಲ್ ಸೇರಿದಂತೆ ಹಲವು ನೇತಾರರು ಭಾಗವಹಿಸಿ ಮಾತನಾಡಿದರು.