ಕೇರಳದಲ್ಲಿ ಏಮ್ಸ್ ಆಸ್ಪತ್ರೆ ಪರಿಗಣನೆಯಲ್ಲಿಲ್ಲ ಕೇಂದ್ರ ಸ್ಪಷ್ಟನೆ
ಕಾಸರಗೋಡು: ಕೇರಳಕ್ಕೆ ಏಮ್ಸ್ ಆಸ್ಪತ್ರೆ ಮಂಜೂರು ಮಾಡುವಿಕೆ ಕೇಂದ್ರ ಸರಕಾರದ ಪರಿಗಣನೆಯಲ್ಲಿಲ್ಲವೆಂದು ಕೇಂದ್ರ ಆರೋಗ್ಯ ಖಾತೆ ಸಚಿವ ಜೆ.ಪಿ. ನಡ್ಡಾ ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಿಪಿಎಂ ರಾಜ್ಯಸಭಾ ಸದಸ್ಯ ಜೋನ್ ಬ್ರಿಟ್ಟೋಸ್ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಸಚಿವರು ಈ ಸ್ಪಷ್ಟೀಕರಣೆ ನೀಡಿದ್ದಾರೆ. ಕೇರಳದಲ್ಲಿ ಏಮ್ಸ್ ಸ್ಥಾಪಿಸುವ ವಿಷಯ ಸದ್ಯ ಪರಿಗಣನೆಯಲ್ಲಿಲ್ಲ. ಪ್ರಧಾನಮಂತ್ರಿ ಸ್ವಾಸ್ಥ್ ಯೋಜನೆ ಪ್ರಕಾರ ಕೇರಳದಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪಿಸುವ ವಿಷಯ ಕೇಂದ್ರ ಸರಕಾರದ ಪರಿಗಣನೆಯಲ್ಲಿ ಇದೆ ಎಂದು ಕಳೆದ ಲೋಕಸಭಾ ಅಧಿವೇಷನದಲ್ಲಿ ಕೇಂದ್ರ ಆರೋಗ್ಯ ಸಚಿವರು ಭರವಸೆ ನೀಡಿದ್ದರೆಂದೂ, ಅದರಿಂದಾಗಿ ಅದಕ್ಕೆ ಅಂಗೀಕಾರ ನೀಡಬೇಕೆಂದು ಜೋನ್ ಬ್ರಿಟ್ಟೋಸ್ ರಾಜ್ಯಸಭೆಯಲ್ಲಿ ಆಗ್ರಹಪಟ್ಟಿದ್ದಾರೆ. ಆದರೆ ಸದ್ಯ ಅಂತಹ ಯಾವುದೇ ವಿಷಯ ಕೇಂದ್ರ ಸರಕಾರದ ಪರಿಗಣನೆಯಲ್ಲಿಲ್ಲವೆಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಕೇರಳದಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪಿಸುವ ವಿಷಯ ಸದ್ಯ ಬದಿಗೆ ಸರಿದಂತಾಗಿದೆ.
ಕೇರಳದಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪಿಸುವ ಹಾಗಿದ್ದಲ್ಲಿ ಅದನ್ನು ಎಂಡೋಸಲ್ಫಾನ್ ಸಂತ್ರಸ್ತರು ಹಾಗೂ ಯಾವುದೇ ರೀತಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳೂ ಇಲ್ಲದ ಕಾಸರಗೋಡು ಜಿಲ್ಲೆಯಲ್ಲೇ ಸ್ಥಾಪಿಸಬೇ ಕೆಂದು ಕಾಸರಗೋಡು ಸಂಸದರು, ಜನ ಪ್ರತಿ ನಿಧಿಗಳು, ಎಂಡೋಸಲ್ಫಾನ್ ಸಂತ್ರಸ್ತರ ಕೂಟ, ವಿವಿಧ ರಾಜಕೀಯ ಪಕ್ಷಗಳ ಕಾಸರ ಗೋಡು ಘಟಕ ಆರಂಭದಲ್ಲೇ ಆಗ್ರಹಪಡುತ್ತಾ ಬಂದಿದೆ. ಆದರೆ ಆ ಬೇಡಿಕೆಗೆ ಕಿವಿಕೊಡದೆ ಹಲವು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಹಾಗೂ ಇತರ ಆಧುನಿಕ ಸೌಕರ್ಯಗಳು ಹೊಂದಿರುವ ಕಲ್ಲಿಕೋಟೆ ಕಿನಾಲೂರಿನಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪಿಸಬೇಕೆಂಬ ಬೇಡಿಕೆ ಕೇರಳ ಸರಕಾರ ಕೇಂದ್ರದೊಡನೆ ಮುಂದಿರಿಸಿತ್ತು. ಮಾತ್ರವಲ್ಲದೆ ಪ್ರಸ್ತುತ ಆಸ್ಪತ್ರೆ ಸ್ಥಾಪಿಸಲು ಅಗತ್ಯದ ಸ್ಥಳವನ್ನೂ ಕಲ್ಲಿಕೋಟೆಯಲ್ಲಿ ಕೇರಳ ಸರಕಾರ ಗುರುತಿಸಿತ್ತು. ಆ ಮೂಲಕ ಕಾಸರಗೋಡಿನ ಜನರ ಬೇಡಿಕೆಯನ್ನು ರಾಜ್ಯ ಸರಕಾರ ಪೂರ್ಣವಾಗಿ ಅವಗಣಿಸಿತ್ತು. ಈ ವಿಷಯದಲ್ಲಿ ಕೇಂದ್ರ ಸರಕಾರ ಈಗ ನೀಡಿರುವ ಸ್ಪಷ್ಟನೆ ಹಿನ್ನೆಲೆಯಲ್ಲಿ ಕೇರಳದ ಏಮ್ಸ್ ಆಸ್ಪತ್ರೆ ಬೇಡಿಕೆ ಸದ್ಯ ಮೂಲೆಗುಂಪಾಗಿದೆ.