ಕೇವಲ ಒಂದೂವರೆ ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗೆ ಕ್ರಮವಿಲ್ಲ: ಜನಸಂಚಾರಕ್ಕೆ ಸಮಸ್ಯೆ
ಕುಂಬಳೆ: ಎರಡು ವಾರ್ಡ್‌ಗಳನ್ನು ಸಂಪರ್ಕಿಸುವ ರಸ್ತೆಯೊಂದು ಅಭಿವೃದ್ಧಿಯಿಲ್ಲದೆ ಶೋಚನೀ ಯಾವಸ್ಥೆಯಲ್ಲಿದ್ದು, ಇದರಿಂದ ಜನಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಕುಂಬಳೆ ಪಂಚಾಯತ್‌ನ ೧೪ನೇ ವಾರ್ಡ್ ಪೆರುವಾಡ್ ಹಾಗೂ ೨೧ನೇ ವಾರ್ಡ್ ಮಾಟೆಂಗುಳಿ ಮಧ್ಯೆಗಿನ ರಸ್ತೆಯ ಸ್ಥಿತಿ ಶೋಚನೀಯವಾಗಿದೆ.
ಮಾವಿನಕಟ್ಟೆಯಿಂದ ಕುಂಟಂಗೇರಡ್ಕಕ್ಕೆ ತೆರಳುವ ಈ ಒಂದೂವರೆ ಕಿಲೋ ಮೀಟರ್ ರಸ್ತೆ ಹಾನಿಗೀಡಾಗಿ ಹಲವು ತಿಂಗಳುಗಳು ಕಳೆಯಿತು. ರಸ್ತೆಗೆ ವರ್ಷಗಳ ಹಿಂದೆ ನಡೆಸಿದ ಡಾಮರೀಕರಣ ಪೂರ್ಣವಾಗಿ ಎದ್ದು ಹೋಗಿದ್ದು, ಜಲ್ಲಿಕಲ್ಲುಗಳು ಎದ್ದುನಿಂತಿವೆ. ದ್ವಿಚಕ್ರ ವಾಹನಗಳು ಹಾಗೂ ಆಟೋ ರಿಕ್ಷಾಗಳಿಗೆ ಸಂಚರಿಸಲು ಸಾಧ್ಯವಾಗದ ಸ್ಥಿತಿ ಈಗ ಎದುರಾಗಿದೆ. ಇದರಿಂದ ತುರ್ತು ಅಗತ್ಯಗಳಿಗಾಗಿ ಯಾರಾದರೂ ಆಟೋ ರಿಕ್ಷಾಗಳ ಸಹಾಯ ಯಾಚಿಸಿದಲ್ಲಿ ಆಟೋ ರಿಕ್ಷಾಗಳಿಗೆ ರಸ್ತೆಯಲ್ಲಿ ತೆರಳಲು ಸಾಧ್ಯವಾಗುತ್ತಿಲ್ಲ. ಕಾರು, ಲಾರಿ ಮುಂತಾದ ವಾಹನಗಳು ಸಂಚರಿಸುವ ವೇಳೆ ಜಲ್ಲಿ ಕಲ್ಲುಗಳು ಪಾದಚಾರಿಗಳ ಮೇಲೆ ಎರಚಲ್ಪಡುತ್ತಿದೆ. ಅಲ್ಲದೆ ರಸ್ತೆ ಬಳಿಯ ಮನೆಗಳಿಗೂ ಕಲ್ಲು ಎಸೆಯಲ್ಪಡುತ್ತಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ.
ಈ ರಸ್ತೆಯನ್ನು ದುರಸ್ತಿಗೊಳಿಸಿ ಜನಸಂಚಾರಕ್ಕೆ ಸೌಕರ್ಯವೊದಗಿಸಬೇಕೆಂದು ಇಲ್ಲಿನ ನಾಗರಿಕರು ಹಲವು ಕಾಲದಿಂದ ಆಗ್ರಹಿಸುತ್ತಿದ್ದಾರೆ. ಆದರೆ ಎರಡೂ ವಾರ್ಡ್‌ಗಳ ಜನಪ್ರತಿನಿಧಿಗಳು ಆಸಕ್ತಿ ತೋರಿಸಿದರೆ ರಸ್ತೆಯ ಅಭಿವೃದ್ಧಿ ಸುಲಭವಾಗಲಿದೆ ಯೆಂದು ನಾಗರಿಕರು ತಿಳಿಸುತ್ತಿದ್ದಾರೆ
೧೪ನೇ ವಾರ್ಡ್‌ನಲ್ಲಿ ಸಿಪಿಎಂ, ೨೧ನೇ ವಾರ್ಡ್‌ನಲ್ಲಿ ಬಿಜೆಪಿ ಸದಸ್ಯರು ಪ್ರತಿನಿಧೀಕರಿಸುತ್ತಿದ್ದಾರೆ. ರಸ್ತೆಯನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಈ ಇಬ್ಬರೂ ಸದಸ್ಯರಲ್ಲಿ ಆಗ್ರಹಪಟ್ಟರೂ ಬೇಡಿಕೆ ಈಡೇರಲಿಲ್ಲ. ಆದ್ದರಿಂದ ರಸ್ತೆಯನ್ನು ತುರ್ತಾಗಿ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ಪಂಚಾಯತ್‌ಗೆ ಮನವಿ ಸಲ್ಲಿಸಲಾಗಿದೆಯೆಂದೂ, ಆದರೂ ಸೂಕ್ತ ಕ್ರಮ ಉಂಟಾಗದಿದ್ದಲ್ಲಿ ಪ್ರತಿಭಟನೆಗೆ ಮುಂದಾಗುವುದಾಗಿ ನಾಗರಿಕರು ತಿಳಿಸುತ್ತಿದ್ದಾರೆ.