ಕೊಂಡೆವೂರು ಮಠಕ್ಕೆ ಚಿತ್ತೈಸಿದ ಶೃಂಗೇರಿ ಶ್ರೀಗಳು
ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮಕ್ಕೆ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ಚಿತ್ತೈಸಿದರು. ಈ ವೇಳೆ ನಡೆದ ಕಾರ್ಯಕ್ರಮದಲ್ಲಿ ಅವರು ಭಕ್ತರನ್ನು ಅನುಗ್ರಹಿಸಿದರು. ಕೊಂಡೆವೂರು ಮಠದ ಗೋ ಶಾಲೆಗೆ ಭೇಟಿ ನೀಡಿದ ಜಗದ್ಗುರುಗಳು ಗೋವಿಗೆ ಗೋಗ್ರಾಸ ನೀಡಿ, ವನದಲ್ಲಿ ಅಪರೂಪದ ಕೃಷ್ಣಾಲ ಗಿಡವನ್ನು ನೆಟ್ಟರು. ನಂತರ ನೂತನ ಅತಿಥಿ ಗೃಹಕ್ಕೆ ಶಿಲಾನ್ಯಾಸಗೈದರು. ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಅವದಾನಿಗಳು ಪ್ರಸ್ತಾಪಿಸಿದರು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಭಕ್ತ ವೃಂದದ ಪರವಾಗಿ ಜಗದ್ಗುರುಗಳನ್ನು ಅಭಿವಂದಿಸಿದರು. ಈ ವೇಳೆ ಆಶೀರ್ವಚನ ನೀಡಿದ ಜಗದ್ಗುರುಗಳು ಶಂಕರಾಚಾರ್ಯರು ಅವತರಿಸಿದ ಪ್ರಾಂತ್ಯದಲ್ಲಿ ಸವಾಲುಗಳ ಮಧ್ಯೆ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಶ್ಲಾಘನೀಯವಾಗಿದ್ದು, ತಮ್ಮ ಬೆಂಬಲ ಹಾಗೂ ಆಶೀರ್ವಾದವಿದೆ ಎಂದರು.
ಇದೇ ವೇಳೆ ಕೇರಳದಲ್ಲಿ ೪೦೦ಕ್ಕೂ ಅಧಿಕ ದೇವಸ್ಥಾನಗಳ ಜೀರ್ಣೋದ್ಧಾರ ಕೈಗೊಂಡ ರಾಜೀವ್‌ರನ್ನು ಸನ್ಮಾನಿಸಲಾಯಿತು. ದೇವಸ್ಥಾನಗಳ ವತಿಯಿಂದ ಜಗದ್ಗುರುಗಳನ್ನು ಅಭಿವಂದಿಸಲಾಯಿತು. ರಾಜರಾಮ್ ಮೀಯಪದವು ಅಭಿವಂದನ ಪತ್ರ ವಾಚಿಸಿದರು. ಗಂಗಾಧರ ಕೊಂಡೆವೂರು ವಂದಿಸಿ, ನಿರೂಪಿಸಿದರು.