ಕೊಡ್ಲಮೊಗರು ಪಾತೂರು ಸೇವಾ ಸಹಕಾರಿ ಬ್ಯಾಂಕ್ ಕಳವು: ಬೆರಳಚ್ಚು, ಶ್ವಾನದಳದಿಂದ ತಪಾಸಣೆ
ವರ್ಕಾಡಿ: ಪಂಚಾಯತ್ ವ್ಯಾಪ್ತಿಯ ದೈಗೋಳಿಯಲ್ಲಿರುವ ಕೊಡ್ಲಮೊಗರು ಪಾತೂರು ಸೇವಾ ಸಹಕಾರಿ ಬ್ಯಾಂಕ್ನ ಶಟರ್ ಮುರಿದು ಕಳವಿಗೆ ಯತ್ನಿಸಿದ ಪ್ರಕರಣದ ಬಗ್ಗೆ ಮಂಜೇಶ್ವರ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ನಿನ್ನೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ತಲುಪಿ ತನಿಖೆ ನಡೆಸಿದ್ದಾರೆ. ಶನಿವಾರ ರಾತ್ರಿ ಕಳವಿಗೆ ಯತ್ನ ನಡೆದಿದೆ ಎಂದು ತಿಳಿದು ಬಂದಿದೆ. ನಿನ್ನೆ ಬೆಳಿಗ್ಗೆ ಬ್ಯಾಂಕ್ನ ಶಟರ್ ತೆರೆದ ಸ್ಥಿತಿಯಲ್ಲಿ ಸ್ಥಳೀಯರು ನೋಡಿದ್ದು, ಕೂಡಲೇ ಬ್ಯಾಂಕ್ ಕಾರ್ಯದರ್ಶಿ ಜಯರಾಮ ಎನ್.ಕೆ.ಯವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತಲುಪಿದ ಅವರು ಹಾಗೂ ಇತರ ಆಡಳಿತ ವರ್ಗದವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಶಟರ್ನ್ನು ಪೂರ್ತಿ ತೆರವುಗೊಳಿಸಿದ ಕಳ್ಳರು ಒಳನುಗ್ಗಿ ಲಾಕರನ್ನು ಮುರಿಯಲು ಪ್ರಯತ್ನಿಸಿ ವಿಫಲಗೊಂಡ ಕಾರಣ ಹೆಚ್ಚಿನ ನಷ್ಟ ಉಂಟಾಗಲಿಲ್ಲ. ಆದರೆ ಕಪಾಟುಗಳನ್ನು ಜಾಲಾಡಿ ದಾಖಲುಪತ್ರಗಳನ್ನೆಲ್ಲಾ ಚೆಲ್ಲಾಪಿಲ್ಲಿಗೊಳಿಸಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಕಾರು ಹಾಗೂ ಪರಿಚಯ ಲಭಿಸದ ರೀತಿಯ ಮುಖ ಸಹಿತ ದೇಹ ಪೂರ್ತಿ ಮರೆಮಾಚಿದ ನಾಲ್ಕು ಮಂದಿಯ ದೃಶ್ಯ ಪತ್ತೆಯಾಗಿದೆ. ಹಾರ್ಡ್ಡಿಸ್ಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.