ಕೊರಗ ಕಾಲನಿಗಳ ಕೈವಶ ಭೂಮಿಗೆ ಹಕ್ಕುಪತ್ರ ವಿತರಣೆ ನಾಳೆ : ಸಚಿವಧ್ವಯರು ನಾಳೆ ಜಿಲ್ಲೆಯಲ್ಲಿ
ಕಾಸರಗೋಡು: ಕೊರಗ ಸಮುದಾಯದವರ ಕಾಲನಿಗಳ ವ್ಯಾಪ್ತಿಯ ಅವರ ಸ್ವಾಧೀನವಿರುವ ಜಮೀನಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ನಾಳೆ ಬೆಳಿಗ್ಗೆ 10ಕ್ಕೆ ಜಿಲ್ಲಾಧಿಕಾರಿ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿದೆ. ಕಂದಾಯ ಸಚಿವ ಕೆ. ರಾಜನ್ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾಧಿಕಾರಿ ಕೆ. ಇಂಭಶೇಖರ್, ಜಿಲ್ಲಾ ಯೋಜನಾಧಿಕಾರಿ ಟಿ. ರಾಜೇಶ್, ಜಿಲ್ಲಾ ಸರ್ವೇ ಸಹಾಯಕ ನಿರ್ದೇಶಕ ಆಸಿಫ್ ಅಲಿಯರ್, ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಕೆ.ಕೆ. ಮೋಹನ್ದಾಸ್, ಸಹಾಯಕ ಅಧಿಕಾರಿ ಕೆ.ವಿ. ರಾಘವನ್ ಮೇಲ್ನೋಟ ವಹಿಸುವರು. ಪರಿಶಿಷ್ಟ ಪಂಗಡ ಅಭಿವೃದ್ಧಿ ಸಚಿವ ಒ.ಆರ್. ಕೇಳು ಅಧ್ಯಕ್ಷತೆ ವಹಿಸುವರು.
16 ಗ್ರಾಮಗಳಲ್ಲಿರುವ 59 ಕಾಲನಿಗಳ 193.557 ಹೆಕ್ಟೇರ್ ಭೂಮಿಯನ್ನು ಗುರುತಿಸಿ ಗಡಿ ಸ್ಥಾಪಿಸಲು ಹಾಗೂ ಕಳೆದುಹೋದ ದಾಖಲೆಗಳ ಪ್ರತಿಗಳನ್ನು ಮಾಲಕರಿಗೆ ನೀಡಲು, ನಿಧನರಾದ ಭೂಮಾಲಿಕರ ಭೂಮಿಯನ್ನು ವಾರೀಸುದಾರರಿಗೆ ನೀಡಲಿರುವ ಯೋಜನೆ ಇದಾಗಿದೆ.
ಮಂಜೇಶ್ವರ ತಾಲೂಕಿನಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ 539 ಕುಟುಂಬಗಳು ವಾಸಿಸುತ್ತಿದ್ದು, 59 ಕಾಲನಿಗಳಲ್ಲಾಗಿ ಒಟ್ಟು 1706 ಮಂದಿ ಇದ್ದಾರೆ. ಇವರಿಗೆ ಭೂಮಿ ಗುರುತಿಸಿ ನೀಡುವ ಯೋಜನೆ ಇದಾಗಿದೆ.