ಕೊಲ್ಲಂನಲ್ಲಿ ಬಾಲಕಿ ಅಪಹರಿಸಲ್ಪಟ್ಟ ವೇಳೆಯಲ್ಲೇ ಕಾಸರಗೋಡಿನಿಂದಲೂ ನಾಲ್ವರು ಮಕ್ಕಳು ನಾಪತ್ತೆ: . ಪೊಲೀಸರು ನಡೆಸಿದ ಸಕಾಲಿಕ ಕಾರ್ಯಾಚರಣೆಯಿಂದ ತಾಸಿನೊಳಗಾಗಿ ಪತ್ತೆ
ಕಾಸರಗೋಡು: ಕೊಲ್ಲಂ ಜಿಲ್ಲೆಯ ಓಯೂರ್ನಲ್ಲಿ ಆರು ವರ್ಷದ ವಿದ್ಯಾರ್ಥಿನಿ ಅಪಹರಿಸಲ್ಪಟ್ಟ ವೇಳೆಯಲ್ಲೇ ಕಾಸರಗೋಡು ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದ ಮೂವರು ವಿದ್ಯಾರ್ಥಿಗಳು ಸೇರಿದಂತೆ ಪ್ರಾಯಪೂರ್ತಿಯಾಗದ ನಾಲ್ವರು ಮಕ್ಕಳು ದಿಢೀರ್ ನಾಪತ್ತೆ ಯಾಗಿ ಅದು ಮಕ್ಕಳ ಮನೆಯ ವರನ್ನು ಬೆಚ್ಚಿಬೀಳಿಸುವಂತೆ ಮಾಡಿದ ಘಟನೆ ನಡೆದಿದೆ.
ಈ ನಾಲ್ವರು ಬಾಲಕರ ಪೈಕಿ ಮೂವರು ವಿದ್ಯಾರ್ಥಿಗಳು ನಿನ್ನೆ ಸಂಜೆ ಶಾಲೆಯಿಂದ ಮನೆಗೆ ಹಿಂತಿರುಗಿ ನಂತರ ಆಟವಾಡಲೆಂದು ಹೇಳಿ ಹೊರಗೆ ಹೋಗಿದ್ದರು. ಆ ಬಳಿಕ ಅವರೂ ಹಾಗೂ ಅದೇ ಪರಿಸರದ ಇನ್ನೋರ್ವ ಬಾಲಕನೂ ಸೇರಿದಂತೆ ನಾಲ್ವರು ತಡವಾದರೂ ಮನೆಗೆ ಹಿಂತಿರುಗಲಿಲ್ಲ. ಇವರೆಲ್ಲರೂ ೧೫ಕ್ಕಿಂತ ಕೆಳಪ್ರಾಯದವರಾಗಿದ್ದಾರೆ. ಈ ವೇಳೆಯಲ್ಲೇ ಕೊಲ್ಲಂನಲ್ಲಿ ಬಾಲಕಿಯನ್ನು ಅಪಹರಿಸಲ್ಪಟ್ಟ ಸುದ್ದಿ ಟಿವಿ ಚ್ಯಾನೆಲ್ಗಳಲ್ಲಿ ಬರತೊಡಗಿತ್ತು. ಅದನ್ನು ಕಂಡು ಗಾಬರಿಗೊಂಡ ಈ ನಾಲ್ವರು ಮಕ್ಕಳ ಹೆತ್ತವರು ತಕ್ಷಣ ತಮ್ಮ ಮಕ್ಕಳು ನಾಪತ್ತೆಯಾದ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣ ಎಚ್ಚೆತ್ತ ಪೊಲೀಸರು ಕಾಸರಗೋಡು ಜಿಲ್ಲೆಯ ಗಡಿ ಪ್ರದೇಶದಲ್ಲಿರುವ ಮಂಗಳೂರು ಸೇರಿದಂತೆ ಕರ್ನಾಟಕದ ಎಲ್ಲಾ ಪೊಲೀಸ್ ಠಾಣೆಗಳಿಗೂ ತುರ್ತು ಮಾಹಿತಿ ರವಾನಿಸಿ ಅವರ ಸಹಾಯ ವನ್ನು ಕೇಳಿಕೊಂಡರು. ಮಾತ್ರವಲ್ಲ ಅಲರ್ಟ್ನ್ನೂ ಘೋಷಿಸಿದರು. ನಾಪತ್ತೆ ಯಾದ ಮಕ್ಕಳ ಪೈಕಿ ಓರ್ವ ಮೊಬೈಲ್ ಫೋನ್ ಹೊಂದಿದ್ದನು. ಅದರ ಟವರ್ ಲೊಕೇಶನ್ನ ಜಾಡು ಹಿಡಿದು ಪೊಲೀಸರು ನಡೆಸಿದ ಶೋಧದಲ್ಲಿ ಮಕ್ಕಳು ಉಡುಪಿಯಲ್ಲಿರುವ ಮಾಹಿತಿ ಲಭಿಸಿತು. ತಕ್ಷಣ ಪೊಲೀಸರು ಆ ಬಗ್ಗೆ ಉಡುಪಿ ಪೊಲೀಸರಿಗೆ ಮಾಹಿತಿ ನೀಡಿ ಅವರ ಸಹಾಯದಿಂದ ನಾಲ್ವರು ಬಾಲಕರನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಸಫಲರಾದರು. ಆ ಕೂಡಲೇ ಕಾಸರಗೋಡು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪಿ. ಅಜಿತ್ ಕುಮಾರ್ರ ನೇತೃತ್ವದಲ್ಲಿ ಪೊಲೀಸರಾದ ಶಿವನ್, ಶಶಿ ಮತ್ತು ರತೀಶ್ ಎಂಬಿವರನ್ನೊಳಗೊಂಡ ಪೊಲೀಸರು ನಾಪತ್ತೆಯಾದ ಮಕ್ಕಳ ಹೆತ್ತವರೊಂದಿಗೆ ನಿನ್ನೆ ರಾತ್ರಿಯೇ ಉಡುಪಿಗೆ ಸಾಗಿ ಅವರನ್ನು ಕಾಸರಗೋಡು ಠಾಣೆಗೆ ಕರೆತಂದರು. ಆ ಬಾಲಕರನ್ನು ಬಳಿಕ ಕೌನ್ಸಿಲಿಂಗ್ಗೊಳಪಡಿಸಿದ ನಂತರ ಹೆತ್ತವರ ಜೊತೆ ಪೊಲೀಸರು ತೆರಳಲು ಅನುಮತಿ ನೀಡಿ ದರು. ತಾವು ಗೋವಾಕ್ಕೆ ಪ್ರವಾಸ ಹೋಗಲು ಯೋಜನೆ ಹಾಕಿದ್ದೆವೆಂದು ಈ ನಾಲ್ವರು ಮಕ್ಕಳು ಪೊಲೀಸರಲ್ಲಿ ಹೇಳಿಕೆ ನೀಡಿದ್ದರು. ಅವರು ಪತ್ತೆಯಾ ಗುವ ಮೂಲಕ ಕಾಸರಗೋಡಿನಲ್ಲಿ ನೆಲೆಗೊಂಡಿದ್ದ ಭೀತಿಯ ವಾತಾವರಣ ಅಲ್ಲಿಗೆ ಶಮನಗೊಂಡಿತು.