ಕೋಟಿ ಪಂಚಾಕ್ಷರಿ ಜಪ ಯಜ್ಞ ಶ್ರೀಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಆರಂಭ
ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಕೋಟಿ ಪಂಚಾಕ್ಷರಿ ಜಪಯಜ್ಞ ಹಾಗೂ ಶ್ರೀಚಕ್ರ ಪೂಜೆ, ರುದ್ರಹೋಮಕ್ಕೆ ಇಂದು ಬೆಳಿಗ್ಗೆ ದೇವತಾಪ್ರಾರ್ಥನೆಯೊಂದಿಗೆ ಚಾಲನೆ ನೀಡಲಾ ಯಿತು. ಬಳಿಕ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಗಮಿಸಿದ್ದು, ಕೋಟಿ ಪಂಚಾಕ್ಷರಿ ಜಪಯಜ್ಞಕ್ಕೆ ಪ್ರಥಮ ಸಮಿಧೆ ಸಮರ್ಪಣೆ ಜರಗಿತು. ಮಧ್ಯಾಹ್ನ ಪೂರ್ಣಾಹುತಿ ನಡೆಯಿತು. ಬಳಿಕ ಅನ್ನ ಸಂತರ್ಪಣೆ ಜರಗಿತು. ಸಂಜೆ ೫ ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ಗೈಯ್ಯುವರು. ಯಜ್ಞ ಸಮಿತಿ ಅಧ್ಯಕ್ಷ ಡಾ. ಅನಂತ ಕಾಮತ್ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿ, ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಉಪಸ್ಥಿತರಿರುವರು. ಮಲಬಾರ್ ದೇವಸ್ವಂ ಬೋರ್ಡ್ ಕಮಿಷನರ್ ಬಿಜು ಟಿ. ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಟಿ. ಶ್ಯಾಮ್ ಭಟ್, ಗೋವಿಂದನ್ ನಾಯರ್, ಟಿ. ರಾಜೇಶ್, ನ್ಯಾಯವಾದಿ ಪಿ. ಮುರಳೀಧರನ್, ಚಂದ್ರಶೇಖರ ಶೆಟ್ಟಿ, ಉಮೇಶ್ ಅಣಂಗೂರು, ಉದ್ಯಮಿಗಳಾದ ಕೆ. ಶ್ರೀಪತಿ ರಾವ್, ಸುರೇಶ್, ಮೀರಾ ಕಾಮತ್ ಉಪಸ್ಥಿತರಿರು ವರು. ರಾತ್ರಿ ಹನುಮಗಿರಿ ಮೇಳದವರಿಂದ ಮಹಿಷಮರ್ದಿನಿ, ಓಂ ನಮಃಶಿವಾಯ ಕಥಾಭಾಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ನಾಳೆ ಬೆಳಿಗ್ಗೆ ಕೊಂಡೆವೂರು ಶ್ರೀ ಯೋಗಾನಂದ ಸ್ವಾಮೀಜಿಯವರಿಂದ ಆಶೀರ್ವಚನ, ಸಂಜೆ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ವಿದ್ಯಾಧರ ಮಾಸ್ತರ್‌ರಿಂದ ಭಕ್ತಿಗೀತೆ ನಡೆಯಲಿದೆ.