ಕೋಟ್ಯಂತರ ರೂ.ಗಳ ವಂಚನೆ: ಬದಿಯಡ್ಕದ ಠೇವಣಿ ಸಂಗ್ರಹ ಕೇಂದ್ರ ಮುಚ್ಚಿರುವುದಾಗಿ ಗ್ರಾಹಕರ ದೂರು
ಬದಿಯಡ್ಕ: ಬದಿಯಡ್ಕದಲ್ಲಿ ಭಾರೀ ಬಡ್ಡಿ ಭರವಸೆ ನೀಡಿ ದೊಟ್ಟ ಮಟ್ಟದಲ್ಲಿ ಕಾರ್ಯಾಚರಿಸುತ್ತಿದ್ದ ವಿತ್ತ ಸಂಸ್ಥೆಯನ್ನು ಮುಚ್ಚಿರುವುದಾಗಿ ದೂರಲಾಗಿದೆ.
ಈ ಬಗ್ಗೆ ನೂರರಷ್ಟು ಗ್ರಾಹಕರು ಇತ್ತೀಚೆಗೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಅದರ ಬಳಿಕ ಹಣಕಾಸು ಸಂಸ್ಥೆಯನ್ನು ನಡೆಸುತ್ತಿದ್ದ ವ್ಯಕ್ತಿ ಠಾಣೆಗೆ ತಲುಪಿ ಸಂಸ್ಥೆಯನ್ನು ತೆರೆಯುವುದಾಗಿಯೂ, ಗ್ರಾಹಕರಿಗೆ ಹಣವನ್ನು ಸಮಯಾನುಸಾರ ನೀಡುವುದಾಗಿಯೂ ತಿಳಿಸಿರುವುದಾಗಿ ಹೇಳಲಾಗುತ್ತಿದೆ.
ರೋಯಲ್ ಟ್ರಾವೆಂಕೂರು ಎಂಬ ಹೆಸರಲ್ಲಿ ಹಣಕಾಸು ಸಂಸ್ಥೆ ಒಂದು ವರ್ಷದ ಹಿಂದೆ ಬದಿಯಡ್ಕದಲ್ಲಿ ಚಟುವಟಿಕೆ ಆರಂಭಿಸಿತ್ತು. ಹಲವಾರು ಮಹಿಳೆಯರು ಕಲೆಕ್ಷನ್ ಏಜೆಂಟರಾಗಿ ಕೆಲಸ ನಿರ್ವಹಿಸಿದ್ದರು. ಕೂಲಿ ಕಾರ್ಮಿಕರು, ಸಣ್ಣ ಉದ್ಯಮಿಗಳನ್ನೆಲ್ಲ ಸಮೀಪಿಸಿ ಭಾರೀ ಬಡ್ಡಿ ಭರವಸೆ ನೀಡಿ ಠೇವಣಿ ಯೋಜನೆಯಲ್ಲಿ ಸೇರಿಸಿಕೊಂಡಿರುವುದಾಗಿ ಹೇಳಲಾಗಿದೆ. ಕೋಟ್ಯಂತರ ರೂಪಾಯಿ ಈ ರೀತಿಯಲ್ಲಿ ಬದಿಯಡ್ಕ ಹಾಗೂ ಪರಿಸರ ಪ್ರದೇಶಗಳಿಂದ ಸಂಗ್ರಹಿಸಿರುವುದಾಗಿ ಹೇಳಲಾಗಿದೆ. ಒಂದು ತಿಂಗಳಾಗುವಾಗ ಠೇವಣಿ ಮೊತ್ತವನ್ನು ಹಿಂತೆಗೆಯಲು ಗ್ರಾಹಕರು ತಲುಪಿದಾಗ ಸಂಸ್ಥೆ ಮುಚ್ಚಿರುವುದು ಕಂಡು ಬಂದಿದೆ. ಸಂಸ್ಥೆ ನಡೆಸುತ್ತಿದ್ದ ವ್ಯಕ್ತಿಗೆ ಫೋನ್ ಮಾಡಿದಾಗ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ. ಕಣ್ಣೂರು ನಿವಾಸಿಗಳು ಈ ಸಂಸ್ಥೆಯನ್ನು ನಡೆಸುತ್ತಿದ್ದು, ಇವರಿಗೆ ಹಲವು ಕಡೆಗಳಲ್ಲಿ ಈ ರೀತಿಯ ಸಂಸ್ಥೆಗಳಿವೆ ಎನ್ನಲಾಗಿದೆ.