ಕೋಳ್ಯೂರು ದೇವಸ್ಥಾನದಿಂದ ಕಳವು: ಆರೋಪಿಗಳನ್ನು ಬಂಧಿಸದಿದ್ದಲ್ಲಿ ತೀವ್ರ ಪ್ರತಿಭಟನೆ- ಕ್ಷೇತ್ರ ಸೇವಾಸಮಿತಿ
ಕಾಸರಗೋಡು: ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದಿಂದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಕಳವಿಗೀಡಾಗಿ ಒಂದು ತಿಂಗಳು ಕಳೆದರೂ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗದಿರುವುದು ಖಂಡನೀಯ ಎಂದು ಕ್ಷೇತ್ರದ ಸೇವಾ ಸಮಿತಿ ಪದಾಧಿಕಾರಿಗಳು ಕಾಸರಗೋಡಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆರೋಪಿಗಳನ್ನು ಇನ್ನೂ ಬಂಧಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾ ಗುವುದೆಂದೂ ಸಂಬಂಧಪಟ್ಟವರು ತಿಳಿಸಿದ್ದಾರೆ. ಕಳೆದ ಜುಲೈ 26ರಂದು ಕ್ಷೇತ್ರಕ್ಕೆ ನುಗ್ಗಿದ ಕಳ್ಳರು 375 ಗ್ರಾಂಗಿಂತಲೂ ಹೆಚ್ಚು ಪ್ರಮಾಣದ ಚಿನ್ನ ಹಾಗೂ 3 ಕಿಲೋ ಬೆಳ್ಳಿಯನ್ನು ದೋಚಿದ್ದಾರೆ. ದೇವಸ್ಥಾನದ ಸಿ.ಸಿ ಟಿ.ವಿಯಲ್ಲಿ ಕಳ್ಳನ ಚಿತ್ರ ಪತ್ತೆಯಾಗಿದೆ. ಅದನ್ನು ಪೊಲೀಸರು ಸಂಗ್ರಹಿಸಿಕೊಂ ಡಿದ್ದರೂ ಆರೋಪಿಯ ಬಂಧನಕ್ಕೆ ಆಸಕ್ತಿ ತೋರಿಸಲಿಲ್ಲ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವು ಕಳವು ಕೃತ್ಯಗಳು ನಡೆದಿದ್ದರೂ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗದಿರುವುದೇ ಕಳ್ಳರು ದೇವಸ್ಥಾನಕ್ಕೆ ನುಗ್ಗಲು ಕಾರಣವಾಗಿ ದೆಯೆಂದು ದೂರಲಾಗಿದೆ. ದೇವಸ್ಥಾನ ಕಳವು ಆರೋಪಿಯನ್ನು ಶೀಘ್ರ ಬಂಧಿಸದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಶ್ರೀ ಶಂಕರನಾರಾಯಣ ಸೇವಾ ಸಮಿತಿ ಅಧ್ಯಕ್ಷ ಬೋಳಂತಕೋಡಿ ರಾಮ ಭಟ್, ದೇವಸ್ಥಾನದ ಪ್ರಧಾನ ಅರ್ಚಕ ರವಿಶಂಕರ ಹೊಳ್ಳ, ಮೊಕ್ತೇಸರ ಕೃಷ್ಣ ಕುಮಾರ ಉತ್ತಾರಕೊಡಂಗೆ, ವಿಠಲ ಭಟ್ ಮೊಗಸಾಲೆ, ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ ಮೊದಲಾದವರು ಪತ್ರಿಕಾಗೋ ಷ್ಠಿಯಲ್ಲಿ ಉಪಸ್ಥಿತರಿದ್ದರು.