ಖಾಲಿಯಾ ರಫೀಕ್ ಕೊಲೆ ಪ್ರಕರಣ : ನಾಲ್ಕು ಮಂದಿ ಆರೋಪಿಗಳ ಖುಲಾಸೆ
ಮಂಗಳೂರು: ಭೂಗತ ಲೋಕದ ತಂಡಗಳ ಹಗೆತನದ ಹಿನ್ನೆಲೆಯಲ್ಲಿ ಎರಡು ಕೊಲೆ ಪ್ರಕರಣಗಳ ಸಹಿತ ೩೦ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಉಪ್ಪಳ ಮಣಿಮುಂಡದ ಖಾಲಿಯಾ ರಫೀಕ್ (45)ನನ್ನು ಕಡಿದು ಹಾಗೂ ಗುಂಡಿಕ್ಕಿ ಕೊಲೆಗೈದ ಪ್ರಕರಣದಲ್ಲಿ ನಾಲ್ಕು ಮಂದಿ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಒಂದನೇ ಆರೋಪಿ ಉಪ್ಪಳ ನಿವಾಸಿ ನೂರಲಿ, ಎರಡನೇ ಆರೋಪಿ ಯೂಸಫ್, ಐದನೇ ಆರೋಪಿ ರಾಜಪುರದ ರಶೀದ್, ಆರನೇ ಆರೋಪಿ ಕಾಸರಗೋಡು ನಿವಾಸಿ ನಜೀಬ್ ಎಂಬಿವರು ತಪ್ಪಿತಸ್ಥರಲ್ಲ ವೆಂದು ತಿಳಿಸಿ ಮಂಗಳೂರು ಪ್ರಥಮ ಅಡಿಶನಲ್ ಸೆಶನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ.
ಒಟ್ಟು 9 ಮಂದಿ ಆರೋಪಿ ಗಳಿರುವ ಈ ಪ್ರಕರಣದ ಇತರ ಆರೋ ಪಿಗಳನ್ನು ಸೆರೆಹಿಡಿಯಲು ಬಾಕಿಯಿದೆ. 2017 ಫೆಬ್ರವರಿ 14ರಂದು ರಾತ್ರಿ ತಲಪ್ಪಾಡಿ ಕೋಟೆಕಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಲಿಯಾ ರಫೀಕ್ನನ್ನು ಕೊಲೆಗೈಯ್ಯಲಾಗಿತ್ತು. ಖಾಲಿಯಾ ರಫೀಕ್ ಸಂಚರಿಸುತ್ತಿದ್ದ ಕಾರಿಗೆ ವಿರುದ್ಧ ದಿಕ್ಕಿನಲ್ಲಿ ಬಂದ ಟಿಪ್ಪರ್ ಲಾರಿಯನ್ನು ಢಿಕ್ಕಿ ಹೊಡೆದು ನಿಲ್ಲಿಸಲಾಗಿದೆ. ಈ ವೇಳೆ ಕಾರಿನಿಂದ ಇಳಿದು ಓಡಿದ ರಫೀಕ್ನನ್ನು ಮತ್ತೊಂದು ಕಾರಿನಲ್ಲಿ ಬಂದ ತಂಡ ಗುಂಡಿಕ್ಕಿ ಕೊಲೆಗೈದಿತ್ತು. ಈ ಮಧ್ಯೆ ಇದೇ ತಂಡ ರಫೀಕ್ಗೆ ಕಡಿದು ಸಾವು ಖಚಿತಪಡಿಸಿದೆ. ಅನಂತರ ಈ ತಂಡ ಬಂದ ಕಾರನ್ನು ಉಪೇಕ್ಷಿಸಿ ಪರಾರಿಯಾಗಿತ್ತು. ಆಕ್ರಮಣದಲ್ಲಿ ರಫೀಕ್ನೊಂದಿಗಿದ್ದ ಮಣಿಮುಂಡದ ಸಾಹಿದ್ನ ಕೈಗೆ ಗಾಯಗಳಾಗಿತ್ತು. ೨೦೧೬ರಲ್ಲಿ ಮಣಿಮುಂಡದ ಮುತ್ತಲೀ ಬ್ರನ್ನು ಕೊಲೆಗೈದುದರ ಪ್ರತೀಕಾರ ವಾಗಿ ಖಾಲಿಯಾ ರಫೀಕ್ನನ್ನು ಕೊಲೆಗೈಯ್ಯಲಾಗಿದೆಯೆಂದು ಅಂದು ವ್ಯಾಪಕ ಆರೋಪ ಕೇಳಿಬಂದಿತ್ತು. ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ಅಸೀಸ್ ಬಾಯಾರು, ವಿಕ್ರಂ ಹೆಗ್ಡೆ, ರಾಜೇಶ್ ಎಂಬಿವರು ನ್ಯಾಯಾಲಯದಲ್ಲಿ ಹಾಜರಾಗಿದ್ದರು