ಗಡಿನಾಡಲ್ಲಿ ಭಾಷಾ ನಿರ್ದೇಶಕರ ನೇಮಕವಾಗಬೇಕು-ಡಾ. ಪುರುಷೋತ್ತಮ ಬಿಳಿಮಲೆ
ನಾರಂಪಾಡಿ: ಗಡಿನಾಡಿನಲ್ಲಿ ಭಾಷಾ ಸಾಮರಸ್ಯವನ್ನು ಕಾಪಾಡುವ ಸಲುವಾಗಿ ಭಾಷಾ ನಿರ್ದೇಶಕರನ್ನು ನೇಮಿಸಲು ರಾಷ್ಟ್ರಪತಿಯವರಿಗೆ ಮನವಿ ಮಾಡಲು ಕರ್ನಾಟಕ ಸರಕಾರಕ್ಕೆ ಒತ್ತಡ ಹಾಕುವುದಾಗಿ ಕರ್ನಾಟಕ ಕನ್ನಡ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು. ಅವರು ಬಳ್ಳಪದವು ನಾರಾಯಣೀಯಂನಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ನಡೆದ ವೇದ ನಾದ ಯೋಗ ತರಂಗಣಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಗಡಿನಾಡಿನ ಮಕ್ಕಳ ಮೇಲೆ ಯಾವುದೇ ಭಾಷಾ ಹೇರಿಕೆ ಸಲ್ಲದು. ಭಾಷಾ ಸಾಮರಸ್ಯವನ್ನು ಕಾಪಾಡಬೇಕು. ಹೆಚ್ಚು ಭಾಷೆಗಳನ್ನು ಕಲಿಯುವುದರಿಂದ ಜ್ಞಾನ ಹೆಚ್ಚಾಗುತ್ತದೆ. ಕಾಸರಗೋಡು ತುಳು ಸಂಸ್ಕೃತಿಯ ಮೂಲವಾಗಿದೆ. ಭಾರತೀಯ ಸಂಸ್ಕೃತಿಯ ಮೂಲ ಅರ್ಥದ ಪರಂಪರೆಯನ್ನು ಉಳಿಸಬೇಕು ಈ ನಿಟ್ಟಿನಲ್ಲಿ ಇಲ್ಲಿ ನಡೆಯುವಂತಹ ಕಾರ್ಯಕ್ರಮ ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು. ಕುಂಬ್ಡಾಜೆ ಪಂಚಾಯಿತ್ ಅಧ್ಯಕ್ಷ ಹಮೀದ್ ಪೊಸಳಿಕೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕ ಸಿ.ಎಚ್.ಕುಂಞAಬು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರವೀಶ ತಂತ್ರಿ ಕುಂಟಾರು, ಶಿವಶಂಕರ ನೆಕ್ರಾಜೆ, ಆನಂದ ಕೆ. ಮವ್ವಾರು, ಅಬ್ದುಲ್ ರಝಾಕ್, ನಾಗರಾಜ ಉಪ್ಪಂಗಳ ಭಾಗವಹಿಸಿದರು. ಸಂಗೀತ ಶಿಕ್ಷಣ ಸಂಸ್ಥೆಯ ಸಂಚಾಲಕ ವಿದ್ವಾನ್ ಯೋಗೀಶ ಶರ್ಮಾ ಬಳ್ಳಪದವು ಪ್ರಾಸ್ತಾವಿಕವಾಗಿ ಮಾತಾಡಿದರು. ರಾಜಾರಾಮ ಪೆರ್ಲ ಸ್ವಾಗತಿಸಿ, ವಯಲಿನ್ ವಿದ್ವಾಂಸ ಪ್ರಭಾಕರ ಕುಂಜಾರು ವಂದಿಸಿದರು. ರಜನಿ ಪ್ರಸಾದ್ ನಿರೂಪಿಸಿದರು. ಬಳಿಕ ವಿಚಾರ ಸಂಕಿರಣ ನಡೆಯಿತು.