ಗಡಿ ಪ್ರದೇಶಗಳಿಗೆ ನಕಲಿ ಮದ್ಯ ಸಾಗಾಟ ನಡೆಸುವ ಕೇಂದ್ರ ಪತ್ತೆ: ಸ್ಪಿರಿಟ್, ಮದ್ಯ ವಶ
ಮಂಜೇಶ್ವರ: ಕೇರಳ ಹಾಗೂ ಗಡಿ ಪ್ರದೇಶಗಳಿಗೆ ವ್ಯಾಪಕವಾಗಿ ನಕಲಿ ಮದ್ಯ ಸಾಗಾಟ ನಡೆಸುವ ಕೇಂದ್ರವೊಂದನ್ನು ಕರ್ನಾಟಕ ಅಬಕಾರಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಲಾಗಿದೆ. ತಲಪಾಡಿಯ ಮನೆಯೊಂದನ್ನು ಕೇಂದ್ರೀಕರಿಸಿ ನಡೆಯುವ ನಕಲಿ ಮದ್ಯ ಕೇಂದ್ರದಿಂದ ವಿವಿಧ ಭಾಗಗಳಿಗೆ ಮದ್ಯ ಸಾಗಾಟವಾಗುತ್ತಿದೆಯೆಂದು ತಿಳಿದು ಬಂದಿದೆ. ಈ ಬಗ್ಗೆ ಖಚಿತ ಮಾಹಿತಿ ಲಭಿಸಿದ ಕರ್ನಾಟಕ ಅಬಕಾರಿ ಅಧಿಕಾರಿಗಳು ಆ ಮನೆಗೆ ದಾಳಿ ನಡೆಸಿದ್ದು, ಈ ವೇಳೆ ಅಪಾರ ಪ್ರಮಾಣದ ಮದ್ಯ ಹಾಗೂ ಸ್ಪಿರಿಟ್ ಪತ್ತೆಹಚ್ಚಲಾಗಿದೆ.
ತಲಪಾಡಿ ಗಡಿ ಪ್ರದೇಶದ ಬಳಿಯ ಸಾಂತ್ಯಾ ಎಂಬಲ್ಲಿರುವ ನಿತ್ಯಾನಂದ ಭಂಡಾರಿ ಎಂಬಾತನ ಮನೆಯಿಂದ೨೨೪೦ ಲೀಟರ್ ಸ್ಪಿರಿಟ್ ೨೨೨ ಲೀಟರ್ ನಕಲಿ ಮದ್ಯ ಹಾಗೂ ಆವುಗಳನ್ನು ತಯಾರಿಸಲು ಬಳಸುವ ಉಪಕರಣಗಳನ್ನು ವಶಪಡಿಸಲಾಗಿದೆ. ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆಯ ವೇಳೆ ಮನೆ ಮಾಲಕ ನಿತ್ಯಾನಂದ ಭಂಡಾರಿ ಓಡಿ ಪರಾರಿಯಾಗಿದ್ದು ಆತನಿಗಾಗಿ ಶೋಧ ನಡೆಯುತ್ತಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ದಕ್ಷಿಣವಲಯ ಎರಡರ ಅಬಕಾರಿ ಇನ್ಸ್‌ಪೆಕ್ಟರ್ ಎಚ್.ಎನ್. ಕಮಲರ ನೇತೃತ್ವದಲ್ಲಿ ೨೫ ಮಂದಿ ಸಿಬ್ಬಂದಿಗಳು ಸೇರಿ ಮದ್ಯ ತಯಾರಿ ಕೇಂದ್ರಕ್ಕೆ ದಾಳಿ ನಡೆಸಿದ್ದಾರೆ.