ಗಲಭೆಗೆ ಆಹ್ವಾನ ನೀಡುವ ಮುಖ್ಯಮಂತ್ರಿ ತಕ್ಷಣ ರಾಜೀನಾಮೆ ನೀಡಬೇಕು-ವಿರೋಧಪಕ್ಷ ನಾಯಕ
ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗಲಭೆಗೆ ಆಹ್ವಾನ ನೀಡುತ್ತಿದ್ದಾರೆಂದೂ, ಆದ್ದರಿಂದ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್ ಆಗ್ರಹಪಟ್ಟಿದ್ದಾರೆ.ಕಣ್ಣೂರು ಜಿಲ್ಲೆಯ ಪಳಯಂಗಾ ಡಿಯಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸಿಪಿಎಂ ಮತ್ತು ಡಿವೈಎಫ್‌ಐ ಕಾರ್ಯಕರ್ತರು ನಡೆಸಿದ ದಾಳಿಯನ್ನು ಸಮರ್ಥಿಸಿ ಕೊಂಡು ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ಇಂತಹ ಕೊಲೆಯತ್ನ ಇನ್ನೂ ಮುಂದುವರಿಯಬೇಕೆಂದು ಮುಖ್ಯಮಂತ್ರಿ ಆಗ್ರಹಿಸುತ್ತಿದ್ದಾರೆಯೇ ಎಂದು ವಿರೋಧಪಕ್ಷ ನಾಯಕರು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ ಓರ್ವ ಕ್ರಿಮಿನಲ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅಂತಹ ಮನೋಭಾವದೊಂದಿಗೆ ಅವರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಖ್ಯಮಂತ್ರಿಯವರು ಕ್ರೂರ ಮನಸ್ಸುನ್ನು ಹೊಂದಿದ್ದಾರೆ. ಇದು ರಾಜರ ಆಡಳಿತವಲ್ಲ ಕೇರಳವಾಗಿದೆ ಎಂಬುವುದನ್ನು ಮುಖ್ಯಮಂತ್ರಿ ನೆನಪಿಸಿಕೊಳ್ಳಬೇಕು ಎಂದು ಹೇಳಿರುವ ವಿಪಕ್ಷ ನಾಯಕರು ಮುಖ್ಯಮಂತ್ರಿಯವರು ಗಲಭೆಗೆ ಆಹ್ವಾನ ನೀಡುತ್ತಿದ್ದಾರೆಂದೂ ಆರೋಪಿಸಿದ್ದಾರೆ. ನವಕೇರಳ ಸಭೆಗೆ ಜನರ ಹಣವನ್ನು ಬಳಸಲಾಗುತ್ತಿದೆ. ಮುಖ್ಯಮಂತ್ರಿ ವಿರುದ್ಧ ಕಪ್ಪು ಪತಾಕೆ ಪ್ರದರ್ಶಿಸಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಹತ್ಯೆಗೈಯ್ಯುವ ಯತ್ನ ನಡೆಸಲಾಗಿದೆಯೆಂದು ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲೂ ತಿಳಿಸಲಾಗಿದೆ. ಆದ್ದರಿಂದ ಗೃಹ ಇಲಾಖೆಯ ಹೊಣೆಗಾರಿಕೆಯನ್ನೂ ಹೊಂದಿರುವ ಮುಖ್ಯಮಂತ್ರಿ ತಮ್ಮ ಸ್ಥಾನದಲ್ಲಿ ಮುಂದುವರಿಯುವ ಹಕ್ಕನ್ನೇ ಈಗ ಕಳೆದುಕೊಂಡಿದ್ದಾರೆ. ಆದ್ದರಿಂದ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.