ಗಾಳಿಗೆ ಕುಸಿದುಬಿದ್ದ ಜಾಹೀರಾತು ಬೋರ್ಡ್ : ಅನಾಹುತದಿಂದ ಪಾರಾದ ಪ್ರಯಾಣಿಕರು
ಕಾಸರಗೋಡು: ಕಾಸರಗೋಡು ಹೊಸ ಬಸ್ ನಿಲ್ದಾಣ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಬೃಹತ್ ಜಾಹೀರಾತು ಬೋರ್ಡ್ ಬಿರುಗಾಳಿಗೆ ಕುಸಿದುಬಿದ್ದು ಪ್ರಯಾಣಿಕರು ಅದೃಷ್ಟವಶಾತ್ ಸಂಭಾವ್ಯ ಅನಾಹುತದಿಂದ ಪಾರಾದ ಘಟನೆ ನಡೆದಿದೆ.
ನಿನ್ನೆ ಸಂಜೆ ಈ ಘಟನೆ ನಡೆದಿದೆ. ಹೊಸ ಬಸ್ ನಿಲ್ದಾಣದ ಮೇಲೆ ಸಿಮೆಂಟ್ ಮತ್ತು ಕಬ್ಬಿಣದ ಕಂಬಗ ಳನ್ನು ಬಳಸಿ ಬೃಹತ್ ಜಾಹೀರಾತು ಬೋರ್ಡ್ ಅಳವಡಿಸಲಾಗಿತ್ತು. ನಿನ್ನೆ ಸಂಜೆ ಬೀಸಿದ ಬಿರುಗಾಳಿಗೆ ಆ ಬೋರ್ಡ್ ಮೇಲಿನಿಂದ ಕಬ್ಬಿಣದ ಕಂಬಗಳೊಂದಿಗೆ ಬುಡ ಸಹಿತ ಕುಸಿದು ಕೆಳಕ್ಕೆ ಬಿದ್ದಿದೆ. ಆ ವೇಳೆ ಪ್ರಯಾಣಿಕರು ಸೇರಿದಂತೆ ಹಲವರು ಅದರ ಅಡಿಭಾಗದಲ್ಲಿದ್ದರು. ಸದ್ದು ಕೇಳಿ ಅವರೆಲ್ಲಾ ಅಲ್ಲಿಂದ ಓಡಿ ಹೋಗಿ ಅದೃಷ್ಟವಶಾತ್ ಸಂಭಾವ್ಯ ಅನಾಹುತದಿಂದ ಪಾರಾಗಿದ್ದಾರೆ.
೨೫ ಅಡಿಯಷ್ಟು ಎತ್ತರ ಮತ್ತು 40 ಅಡಿಯಷ್ಟು ಉದ್ದದಲ್ಲಿ ಈ ಜಾಹೀರಾತು ಬೋರ್ಡ್ ಸ್ಥಾಪಿ ಸಲಾಗಿತ್ತು. ಅದು ಕುಸಿದು ಬೀಳುವ ವೇಳೆ ಮಳೆಯೂ ಸುರಿಯುತ್ತಿತ್ತು. ಕಾಸರಗೋಡು ಅಗ್ನಿಶಾಮಕದಳ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಅಗತ್ಯದ ಸಹಾಯ ನೀಡಿದರು. ವಿಷಯ ತಿಳಿದು ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಸ್ಥಳಕ್ಕೆ ಆಗಮಿಸಿ ಸ್ಥಿತಿಗತಿಗಳ ಬಗ್ಗೆ ಅವಲೋಕನ ನಡೆಸಿದರು.