ಗುತ್ತಿಗೆದಾರ, ಸ್ನೇಹಿತನನ್ನು ಅಪಹರಿಸಿ ೫೦ ಲಕ್ಷ ರೂ. ದರೋಡೆ: ತನಿಖೆ ಕಾಸರಗೋಡಿಗೆ

ಕಾಸರಗೋಡು: ಮೈಸೂರಿನಲ್ಲಿ ಚಿನ್ನ ಮಾರಾಟ ಮಾಡಿ ಕಾರಿನಲ್ಲಿ ಊರಿಗೆ ಮರಳುತ್ತಿದ್ದ ಮಲಪ್ಪುರಂ ನಿವಾಸಿಗಳನ್ನು ಕಾರು ಸಹಿತ ಅಪಹರಿಸಿ ಕೊಂಡೊಯ್ದು ೫೦ ಲಕ್ಷ ರೂಪಾಯಿ ದರೋಡೆ ಗೈದ ಪ್ರಕರಣದ ತನಿಖೆಯನ್ನು ಕಾಸರಗೋಡು ಹಾಗೂ ಕಣ್ಣೂರಿಗೆ ವಿಸ್ತರಿಸಲಾಗಿದೆ.

ಮಲಪ್ಪುರಂ ತಿರುರಂಗಾಡಿಯ ಗುತ್ತಿಗೆದಾರ ಕೆ. ಶಂಜದ್ (೨೮), ಸ್ನೇಹಿತ ಹಾಗೂ ವಿದ್ಯಾರ್ಥಿಯೂ ಆದ ಅಫ್ನು (೧೮) ಎಂಬಿವರನ್ನು ನಿನ್ನೆ ಮುಂಜಾನೆ ಕೊಡಗು  ತಿತಿಮತ್ತಿ ಭದ್ರಗೋಳ ಸಮೀಪದಿಂದ ಅಪಹರಿಸಲಾಗಿದೆ. ತನ್ನ ಕೈವಶವಿದ್ದ ೭೫೦ ಗ್ರಾಂ ಚಿನ್ನವನ್ನು ಮೈಸೂರಿನಲ್ಲಿ ಮಾರಾಟ ನಡೆಸಿ ಹಣದೊಂದಿಗೆ ಶಂಜದ್ ಹಾಗೂ ಸ್ನೇಹಿತ ಊರಿಗೆ ಮರಳುತ್ತಿದ್ದಾಗ ಘಟನೆ ನಡೆದಿದೆ. ಭದ್ರಗೋಳಿ ಎಂಬಲ್ಲಿಗೆ ಸಮೀಪಕ್ಕೆ ತಲುಪಿದಾಗ ರಸ್ತೆ ಬದಿಯಲ್ಲಿ ಲಾರಿಯೊಂದನ್ನು ನಿಲುಗಡೆಗೊಳಿಸಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಇದನ್ನು ಕಂಡು ಕಾರಿನ ವೇಗವನ್ನು ಕಡಿಮೆ ಮಾಡಿದಾಗ ಕೆಲವು ವಾಹನಗಳಲ್ಲಿ  ತಲುಪಿದ ೧೫ರಷ್ಟು ಮಂದಿ ತಂಡ  ಹಣ ಕೇಳಿದ್ದಾರೆ. ದರೋಡೆ ತಂಡ ಮಲೆಯಾಳದಲ್ಲಿ ಮಾತನಾಡಿದೆ. ಹಣವಿಲ್ಲವೆಂದು ತಿಳಿಸಿದಾಗ ಕಾರು ಸಹಿತ  ಅಪಹರಿಸಿಕೊಂಡೊಯ್ದು ಹಣ ದರೋಡೆ ಗೈದ ಬಳಿಕ ನಿರ್ಜನ ಪ್ರದೇದಲ್ಲಿ ಉಪೇಕ್ಷಿಸಿ ತಂಡ ಪರಾರಿಯಾಗಿದೆ ಎಂದು ಶಂಜದ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಾತ್ರಿ ಹೊತ್ತಾದುದರಿಂದ  ಸ್ಥಳದ ಪರಿಚಯವಿಲ್ಲದೆ ಒಂದೂವರೆ ಕಿಲೋ ಮೀಟರ್ ದೂರಕ್ಕೆ ನಡೆದು ಮುಖ್ಯ ರಸ್ತೆಗೆ ತಲುಪಿದಾಗ ಒಂದು ಪತ್ರಿಕಾ ವಿತರಣೆ ವಾಹನಕ್ಕೆ ಹತ್ತಿ ವಿರಾಜ್ ಪೇಟೆ ಪೊಲೀಸ್ ಠಾಣೆಗೆ ತಲುಪಿ ದೂರು ನೀಡಲಾಗಿದೆ. ಪೊಲೀಸರು ನಡೆಸಿದ ತನಿಖೆಯಲ್ಲಿ ಶಂಜದ್‌ರ ಕಾರು ಕೊಲತ್ತೋಡ್ ಎಂಬಲ್ಲಿ ಪತ್ತೆಯಾಗಿದೆ. ಕಾರು ಹಾನಿಗೀಡಾದ ಸ್ಥಿತಿಯಲ್ಲಿತ್ತು. ವಿಷಯ ತಿಳಿದು ಐ.ಜಿ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಪ್ರತ್ಯೇಕ ತನಿಖಾ ತಂಡವನ್ನು ರೂಪೀಕರಿಸಿ ತನಿಖೆ ನಡೆಸಲಾಗುತ್ತಿದೆ. ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಇದೇ ರೀತಿಯ ವಂಚನೆ ನಡೆಸಿದವರನ್ನು ಕೇಂದ್ರೀಕರಿಸಿ ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page