ಚಂದ್ರಗಿರಿ ಹೊಳೆಯಲ್ಲಿ ನೀರು ಪಾಲಾದ ವ್ಯಕ್ತಿ ಎಡನೀರು ನಿವಾಸಿ

ಕಾಸರಗೋಡು: ಚಂದ್ರಗಿರಿ ಹೊಳೆಯ ಚಳಿಯಂಗೋಡಿನಲ್ಲಿ ಮೊನ್ನೆ ಪತ್ತೆಯಾದ ಯುವಕನ ಮೃತದೇಹದ ಗುರುತು ಹಚ್ಚಲಾಗಿದೆ.

ಮೃತರು ಎಡನೀರು ಬೈರಮೂಲೆಯ ಬಿ. ಪುಷ್ಪಕುಮಾರ್ (43) ಎಂದು ಗುರುತಿಸಲಾಗಿದೆ. ಮೃತರ ಸಹೋದರ ಉಮಾ ಶಂಕರ್  ಜನರಲ್ ಆಸ್ಪತ್ರೆಗೆ ಬಂದು ಅಲ್ಲಿನ ಶವಾಗಾರದಲ್ಲಿ ಇರಿಸಲಾಗಿದ್ದ ಮೃತದೇಹದ ಗುರುತು ಹಚ್ಚಿದ್ದಾರೆ.

ಪುಷ್ಪಕುಮಾರ್ ಕಳೆದ ಸೋಮವಾರ ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹೊರಕ್ಕೆ  ಹೋಗಿದ್ದರು. ಟೈಲ್ಸ್ ಕಾರ್ಮಿಕರಾದ ಅವರು ಕೆಲಸಕ್ಕಾಗಿ ಮಂಗಳೂರಿಗೆ ಹೋಗಿರಬಹುದೆಂದು ಮನೆಯವರು ಭಾವಿಸಿದ್ದರು. ಪುಷ್ಪ ಕುಮಾರ್ ಸೋಮವಾರ ಮಧ್ಯಾಹ್ನ ಚಂದ್ರಗಿರಿ ಸೇತುವೆಯಿಂದ ಹಾರಿರುವುದನ್ನು ಊರವರು ನೋಡಿದ್ದರು. ಆದರೆ ಹೊಳೆಗೆ ಹಾರಿದ ವ್ಯಕ್ತಿ ಯಾರೆಂದು  ಗುರುತುಹಚ್ಚಲು ಅಂದು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ್ಲ.  ಅವರಿಗಾಗಿ ಪೊಲೀಸರು ಮತ್ತು ಅಗ್ನಿಶಾಮಕದಳ ವ್ಯಾಪಕ ಶೋಧ ಆರಂಭಿಸುತ್ತಿದ್ದಂತೆ ಪುಷ್ಪ ಕುಮಾರ್ ರ ಮೃತದೇಹ ಮೊನ್ನೆ ಚಳಿಯಂಗೋಡಿನಲ್ಲಿ ಪತ್ತೆಯಾಗಿದೆ.  ಮೇಲ್ಪರಂಬ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹದ ಮಹಜರು ನಡೆಸಿದರು. 

ದಿ| ವೆಂಕಟರಮಣ ರಾವ್-ಕಮಲಾ ದಂಪತಿಯ ಪುತ್ರನಾದ ಮೃತರು ಸಹೋದರರಾದ ಹರೀಶ್, ಉಮಾಶಂಕರ್, ಸಹೋದರಿಯರಾದ ಯಮುನ, ಪುಷ್ಪಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page