ಚಾಲಕ್ಕುಡಿ ಬ್ಯಾಂಕ್ ದರೋಡೆ: ಆರೋಪಿಗಾಗಿ ಶೋಧ ತೀವ್ರ
ತೃಶೂರು: ಚಾಲಕ್ಕುಡಿ ಪೋಟ್ಟ ಎಂಬಲ್ಲಿನ ಫೆಡರಲ್ ಬ್ಯಾಂಕ್ ಶಾಖೆಯಿಂದ ನಿನ್ನೆ ಹಾಡಹಗಲೇ ನಡೆದ ದರೋಡೆ ಪ್ರಕರಣದ ಆರೋಪಿಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ. ಆರೋಪಿ ಅಂಗಮಾಲಿಯತ್ತ ಪರಾರಿಯಾ ಗಿದ್ದಾನೆಂಬ ಬಗ್ಗೆ ಮಾಹಿತಿ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ತನಿಖೆಯನ್ನು ಅತ್ತ ವಿಸ್ತರಿಸಲಾಗಿದೆ. ನಿನ್ನೆ ಮಧ್ಯಾಹ್ನ ೨.೧೫ರ ವೇಳೆ ಈ ದರೋಡೆ ಕೃತ್ಯ ನಡೆದಿದೆ.
ಹೆಲ್ಮೆಟ್, ಜಾಕೆಟ್ ಧರಿಸಿ ಬ್ಯಾಂಕ್‌ಗೆ ನುಗ್ಗಿದ ದರೋಡೆಕೋರ ಅಲ್ಲಿನ ನೌಕರರಿಗೆ ಚಾಕು ತೋರಿಸಿ ಬೆದರಿಕೆ ಯೊಡ್ಡಿ ೧೫.೨೦ ಲಕ್ಷ ರೂಪಾಯಿ ದೋಚಿದ್ದಾನೆ. ಕ್ಯಾಶ್ ಕೌಂಟರ್‌ನಲ್ಲಿ ೪೫ ಲಕ್ಷ ರೂಪಾಯಿಗಳಿತ್ತು. ಈ ಪೈಕಿ ೧೫.೨೦ ಲಕ್ಷ ರೂಪಾಯಿಗಳನ್ನು ಮಾತ್ರವೇ ಆರೋಪಿ ತನ್ನ ಬ್ಯಾಗ್ ಗೆ ತುಂಬಿಸಿ ಸ್ಕೂಟ ರ್‌ನಲ್ಲಿ ಪರಾರಿಯಾಗಿದ್ದಾನೆ. ಇದೊಂದು ಯೋಜನಾಬದ್ಧ ದರೋಡೆ ಕೃತ್ಯವಾಗಿ ದೆಯೆಂದು ಪೊಲೀಸರು ಅಂದಾಜಿಸಿದ್ದಾರೆ. ಬ್ಯಾಂಕ್‌ನ ಬಗ್ಗೆ ಪೂರ್ಣ ಮಾಹಿತಿಯುಳ್ಳ ವ್ಯಕ್ತ್ತಿಯೇ ಇದರ ಹಿಂದಿರಬಹುದೆಂದೂ ಸಂಶಯಿಸಲಾಗಿದೆಯೆಂದು ಪೊಲೀಸ್ ಮೂಲಗಳು ತಿಳಿಸುತ್ತಿವೆ. ಮಧ್ಯಾಹ್ನ ಬ್ಯಾಂಕ್ ನೌಕರರು ಊಟ ಮಾಡುತ್ತಿರುವ ಸಂದರ್ಭವನ್ನು ನೋಡಿಕೊಂಡು ಆರೋಪಿ ದರೋಡೆಗಾಗಿ ತಲುಪಿದ್ದಾನೆ.