ಚಿರತೆ ಪತ್ತೆಗಾಗಿ ನಾಲ್ಕು ದಿನಗಳಿಂದ ಕಾಯುತ್ತಿರುವ ಅಧಿಕಾರಿಗಳು: ಎಲ್ಲರ ಕಣ್ಣುಗಳು ಗೂಡಿನತ್ತ
ಮುಳ್ಳೇರಿಯ: ಇರಿಯಣ್ಣಿ ಹಾಗೂ ಪರಿಸರ ಪ್ರದೇಶಗಳಲ್ಲಿ ಕಳೆದೊಂದು ವರ್ಷದಿಂದ ಅಲೆದಾಡುತ್ತಿರುವ ಇದೀಗ ಚಿರತೆಯನ್ನು ಸೆರೆಹಿಡಿಯಲು ಅರಣ್ಯಾಧಿಕಾರಿಗಳು ಪ್ರಯತ್ನಿಸುತ್ತಿದ್ದರೂ ಚಿರತೆಯ ಮಾಹಿತಿ ಲಭ್ಯವಾಗಿಲ್ಲ. ಚಿರತೆ ಹೆಚ್ಚಾಗಿ ಕಾಣಿಸಿಕೊಂಡಿದ್ದ ಪ್ರದೇಶದಲ್ಲಿ ಗೂಡು ಸ್ಥಾಪಿಸಿ ಕಳೆದ ನಾಲ್ಕು ದಿನಗಳಿಂದ ನಿಗಾ ವಹಿಸಲಾಗುತ್ತಿದೆ.
ಕುಣಿಯೇರಿಯ ವ್ಯಕ್ತಿಯೊಬ್ಬರ ಹಿತ್ತಿಲಿನಲ್ಲಿ ಸೆ. 27ರಂದು ರಾತ್ರಿ ಗೂಡು ಸ್ಥಾಪಿಸಲಾಗಿದೆ. ಅದರಲ್ಲಿ ಆಡನ್ನು ಕಟ್ಟಿಹಾಕಲಾಗಿದೆ. ಆಡಿನ ಕೂಗು ಕೇಳಿ ಚಿರತೆ ಅಲ್ಲಿಗೆ ತಲುಪಬಹುದೆಂಬ ನಿರೀಕ್ಷೆಯಿಂದ ಗೂಡು ಸ್ಥಾಪಿಸಲಾಗಿದೆ. ಆದರೆ ಚಿರತೆ ಈ ಭಾಗಕ್ಕೆ ತಲುಪಿಲ್ಲ.
ಇರಿಯಣ್ಣಿ ಹಾಗೂ ಪರಿಸರ ಪ್ರದೇಶದ ಜನವಾಸ ಪ್ರದೇಶಗಳಲ್ಲಿ ಚಿರತೆ ಪದೇ ಪದೇ ಕಾಣಿಸುತ್ತಿದೆಯೆಂಬ ಮಾಹಿತಿಯ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಕ್ಯಾಮರಾ ಸ್ಥಾಪಿಸಿದ್ದರು. ಅದರಲ್ಲಿ ಚಿರತೆಯ ದೃಶ್ಯ ಸೆರೆಯಾದುದರಿಂದ ಈ ಭಾಗದಲ್ಲಿ ಚಿರತೆಯಿರುವುದನ್ನು ಖಚಿತಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗೂಡು ಸ್ಥಾಪಿಸಿ ಚಿರತೆಗಾಗಿ ಕಾಯಲಾಗುತ್ತಿದೆ. ಏನೇ ಆದರೂ ಈ ಭಾಗದಲ್ಲಿ ಚಿರತೆ ಇರಬಹುದೆಂದೂ ಅದು ಶೀಘ್ರ ತಲುಪಲಿದ್ದು ಹಾಗಾದಲ್ಲಿ ಗೂಡಿನೊಳಗೆ ಸೆರೆಯಾಗುವುದು ಖಚಿತ ಎಂದು ಅರಣ್ಯಾಧಿಕಾರಿಗಳು ಹೇಳುತ್ತಿದ್ದಾರೆ.