ಚೆರ್ಕಳದ ಖೋಟಾನೋಟು ಮುದ್ರಣ ಪ್ರೆಸ್ಗೆ ಮಾಲಕ ಸಹಿತ ತಲುಪಿದ ಪೊಲೀಸರಿಂದ ತನಿಖೆ: ಕಂಪ್ಯೂಟರ್, ಉಪೇಕ್ಷಿತ ನೋಟು ಪತ್ತೆ
ಕಾಸರಗೋಡು: ಮಂಗಳೂರಿನಲ್ಲಿ ಸೆರೆಯಾದ ಖೋಟಾನೋಟುಗಳನ್ನು ಮುದ್ರಿಸಿದ ಚೆರ್ಕಳದ ಪ್ರಿಂಟಿಂಗ್ ಪ್ರೆಸ್ನಲ್ಲಿ ಪೊಲೀಸರು ತನಿಖೆ ನಡೆಸಿದರು. ಚೆರ್ಕಳದ ಶ್ರೀಲಿಪಿ ಪ್ರೆಸ್ನಲ್ಲಿ ಮಂಗಳೂರು ಸೈಬರ್ ಇಕಾನೋಮಿಕ್ಸ್ ಆಂಡ್ ನಾರ್ಕೋಟಿಕ್ ಪೊಲೀಸ್ ಎಸ್ಐ ಕೃಷ್ಣ ಬಾಯಾರು ಹಾಗೂ ತಂಡ ತನಿಖೆ ನಡೆಸಿದೆ.
ಖೋಟಾನೋಟುಗಳನ್ನು ಮುದ್ರಿಸಲು ಉಪಯೋಗಿಸಿದ ಪ್ರಿಂಟರ್, ಕಂಪ್ಯೂಟರ್ಗಳನ್ನು ಪತ್ತೆಹಚ್ಚಲಾಗಿದೆ. ನಿರ್ಮಾಣಕ್ಕಾಗಿ ಉಪಯೋಗಿಸಿ ಪೇಪರ್ಗಳನ್ನು ಕೂಡಾ ಇಲ್ಲಿಂದ ಪತ್ತೆಹಚ್ಚಲಾಗಿದೆ. ಪ್ರೆಸ್ನ ಒಳಗೆ ಹಾಗೂ ಹೊರಗಿನಿಂದ ಉಪೇಕ್ಷಿತ ನೋಟುಗಳನ್ನು ಹಾಗೂ ಅವುಗಳ ತುಂಡುಗಳನ್ನು ಪತ್ತೆಹಚ್ಚಲಾಗಿದೆ. ಮಾಲಕ ಕೊಳತ್ತೂರು ಕರಿಚ್ಚೇರಿ ಪೆರಳದ ವಿ. ಪ್ರಿಯೇಶ್ನನ್ನು ಕರೆದುಕೊಂಡು ಪೊಲೀಸರು ಪ್ರೆಸ್ ಪರಿಶೀಲಿಸಿದ್ದಾರೆ. ಪ್ರಿಯೇಶ್ ಸಹಿತ ಮುಳಿಯಾರು ಮಲ್ಲದ ಕಲ್ಲುಕಂಡ ನಿವಾಸಿ ಕೆ. ವಿನೋದ್ ಕುಮಾರ್, ಪೆರಿಯ ಕುಣಿ ಶಿಫಾ ಮಂಜಿಲ್ನ ಅಬ್ದುಲ್ ಖಾದರ್, ಕರ್ನಾಟಕ ಪುತ್ತೂರು ಬಲ್ನಾಡು ನಿವಾಸಿ ಆಯೂಬ್ ಖಾನ್ರನ್ನು ಮಂಗಳೂರು ಪೊಲೀಸರು ಸೆರೆಹಿಡಿದಿದ್ದರು. ಮಂಗಳೂರು ಕ್ಲಾಕ್ ಟವರ್ ಸಮೀಪದ ವಸತಿಗೃಹದಲ್ಲಿ ಖೋಟಾನೋಟು ವಿತರಣೆ ನಡೆಯುತ್ತಿದೆಯೆಂಬ ರಹಸ್ಯ ಮಾಹಿತಿ ಆಧಾರದಲ್ಲಿ ಪೊಲೀಸರು ದಾಳಿ ನಡೆಸಿ ಇವರನ್ನು ಸೆರೆಹಿಡಿದಿದ್ದರು. ಮೂರು ತಿಂಗಳ ಹಿಂದೆಯೇ ಚೆರ್ಕಳದಲ್ಲಿ ಖೋಟಾನೋಟು ನಿರ್ಮಾಣ ಆರಂಭಗೊಂಡಿದೆಯೆಂದು ಪೊಲೀಸರಿಗೆ ಮಾಹಿತಿ ಲಭಿಸಿದೆ.