ಚೆರ್ಕಳ ಪೇಟೆಯಲ್ಲಿದ್ದ ಬೃಹತ್ ಮರ ಇನ್ನು ನೆನಪು ಮಾತ್ರ
ಚೆರ್ಕಳ: ಇಲ್ಲಿನ ಪೇಟೆಯಲ್ಲಿದ್ದ ಹಳೇಯದಾದ ಬೃಹತ್ ಮರ ಇನ್ನು ನೆನಪು ಮಾತ್ರ. ಚೆರ್ಕಳ ಪೇಟೆಯ ಕಾಞಂಗಾಡ್ ಭಾಗಕ್ಕಿರುವ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಿದ್ದ ಸ್ಥಳದಲ್ಲಿದ್ದ ಬೃಹತ್ತಾದ ನೆರಳು ಮರವನ್ನು ಮುರಿದು ತೆಗೆಯಲಾಗಿದೆ. ರಾಷ್ಟ್ರೀಯ ಹೆದ್ದಾರಿಯಂಗವಾಗಿ ಚೆರ್ಕಳ ಪೇಟೆಯಲ್ಲಿ ನಿರ್ಮಿಸುತ್ತಿರುವ ಫ್ಲೈಓವರ್‌ನಿಂದ ಚೆರ್ಕಳ ಬಸ್ ನಿಲ್ದಾಣಕ್ಕೂ, ಚೆರ್ಕಳ-ಜಾಲ್ಸೂರ್, ಚೆರ್ಕಳ- ಕಲ್ಲಡ್ಕ ಅಂತಾರಾಜ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸಲು ಈ ಮರವನ್ನು ಮುರಿದು ತೆಗೆಯಲಾಗಿದೆ. ಚೆರ್ಕಳ ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದ ಬಿ.ಕೆ.ಪಾರ ನಿವಾಸಿ ದಿ| ಬೇರ್ಕ ಅಪ್ಪ ಎಂಬವರು ನಾಲ್ಕೂವರೆ ದಶಕಗಳ ಹಿಂದೆ ಮರವನ್ನು ನೆಟ್ಟಿದ್ದರು. ಹಲವಾರು ಸಾರ್ವಜನಿಕ ಸಭೆಗಳು ಕೂಡಾ ಈ ಮರದ ನೆರಳಿನಲ್ಲಿ ನಡೆಸಲಾಗುತ್ತಿತ್ತು.