ಜಲನಿಧಿ ಯೋಜನೆ ಮೂಲೆಗುಂಪು: ಪೈವಳಿಕೆ ಪಂಚಾಯತ್ ವ್ಯಾಪ್ತಿಯಲ್ಲಿ ತೀವ್ರಗೊಂಡ ಕುಡಿಯುವ ನೀರು ಸಮಸ್ಯೆ
ಪೈವಳಿಕೆ: ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕಗೊಂಡಿದ್ದು, ಸ್ಥಳೀಯರು ನೀರಿಗಾಗಿ ಪರದಾ ಡಬೇಕಾದ ಸ್ಥಿತಿ ಉಂಟಾಗಿದೆ ಎಂದು ದೂರಲಾಗಿದೆ. ವಾರ್ಡ್‌ಗಳಲ್ಲಿ ಹಲವು ಸರಕಾರಿ ಬಾವಿಗಳಿದ್ದರೂ ದುರಸ್ಥಿಗೊಳಿಸದ ಕಾರಣ ಅವುಗಳೆಲ್ಲಾ ಉಪಯೋಗಶೂನ್ಯ ಗೊಂಡಿರುವುದಾಗಿ ಸ್ಥಳೀಯರು ದೂರಿದ್ದಾರೆ. ಗ್ರಾಮೀಣ ಪ್ರದೇಶದ ಜನರು ಕೂಡಾ ನೀರಿಗಾಗಿ ಸಂಕಷ್ಟ ಅನುಭವಿಸುತ್ತಿದ್ದು, ಪಂಚಾಯತ್ ಕುಡಿಯುವ ನೀರು ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿ ಸಿದ್ದಾರೆ.
ಸುಮಾರು ಹತ್ತು ವರ್ಷದ ಹಿಂದೆ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿ ಯುವ ನೀರಿಗಾಗಿ ನಿರ್ಮಿಸಿದ ಜಲನಿಧಿ ಯೋಜನೆ ಈಗ ಮೂಲೆಗುಂಪಾಗಿದ್ದು, ಕೆಲವು ವಾರ್ಡ್‌ಗಳಲ್ಲಿ ಮಾತ್ರವೇ ಜ್ಯಾರಿಯಲ್ಲಿದೆ. ಪೈಪ್‌ಲೈನ್ ಅಳವಡಿಕೆಯಲ್ಲಿ ಉಂಟಾದ ಲೋ ದಿಂದಾಗಿ ಜಲನಿಧಿ ಯೋಜನೆಯ ನೀರು ವಿತರಣೆ ಮೊಟಕುಗೊಳ್ಳಲು ಕಾರಣವೆಂದು ಸ್ಥಳೀಯರು ತಿಳಿಸಿದ್ದಾರೆ. ಈ ಯೋಜನೆಯಿಂದ ಆರಂಭದ ಕೆಲವು ತಿಂಗಳುಗಳು ಮಾತ್ರವೇ ಪ್ರಯೋಜನ ಲಭಿಸಿದ್ದು, ಬಳಿಕ ಅದು ಉಪಯೋಗಶೂನ್ಯ ಗೊಂಡಿದೆ. ಯೋಜನೆಗಾಗಿ ಕಳಾಯಿ ಹೊಳೆಯಲ್ಲಿ ನಿರ್ಮಿಸಲಾದ ಬಾವಿ, ಪಂಪ್‌ಶೆಡ್ ಮೂಲೆಗುಂಪಾಗಿದೆ. ಸ್ಥಳೀಯರು ನೀರು ವಿತರಣೆಗಾಗಿ ಈ ಹಿಂದೆ ನೀಡಿದ ಹಣವು ಇದರಿಂದ ನಷ್ಟಗೊಂಡಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್‌ನ ಯೋಜನೆಯಲ್ಲಿ ಆದರೂ ನೀರು ಲಭಿಸಬಹುದೆಂಬ ಸ್ಥಳೀಯರ ಕನಸು ಇನ್ನೂ ನನಸಾಗಿಲ್ಲ. ಈ ಯೋಜನೆಗೆ ಅರ್ಜಿ ಸ್ವೀಕರಿಸಿದ್ದು ಮಾತ್ರವಾಗಿದ್ದು, ಮುಂದಿನ ಕಾರ್ಯಗಳಲ್ಲಿ ಪ್ರಗತಿ ಉಂಟಾಗಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ಸಂಬಂಧಪಟ್ಟ ಪಂಚಾಯತ್, ಉನ್ನತಾಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.