ಜಿಲ್ಲೆಯಲ್ಲಿ ಇಂದೂ ರೆಡ್ ಅಲರ್ಟ್: ಭೂಕುಸಿತ ಭೀತಿ ಪನತ್ತಡಿ ಪಂಚಾಯತ್‌ನಲ್ಲಿ 28 ಕುಟುಂಬಗಳ ಸ್ಥಳಾಂತರ

ಕಾಸರಗೋಡು: ಭಾರೀ ಮಳೆಗೆ ಪನತ್ತಡಿ ಪಂಚಾಯತ್‌ನ ಕಲ್ಲಪಳ್ಳಿ ಕಮ್ಮಾಡಿ ಪತ್ತುಕುಡಿಯಲ್ಲಿ ಭೂಕುಸಿತದ ಬೆದರಿಕೆಯುಂಟಾಗಿದ್ದು, ಆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಲ್ಲಿಂದ 20 ಕುಟುಂಬಗಳಿಗೆ ಸೇರಿದ ನೂರಾರು ಮಂದಿಯನ್ನು ಪಂಚಾಯತ್  ಮತ್ತು ಕಂದಾಯ ಇಲಾಖೆಯ ಸಹಾಯದೊಂದಿಗೆ ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಈ ಪರಿಸರದಲ್ಲಿ ಹಲವಾರು ಕುಟುಂಬಗಳು ವಾಸಿಸುತ್ತಿವೆ. ಅವರನ್ನು ಬೇರೆಡೆಗೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ಹೀಗೆ ಸ್ಥಳಾಂತರಿಸಲ್ಪಟ್ಟವರನ್ನು ಕಮ್ಮಾಡಿ ಎಂಜಿಎಲ್, ವಿವಿಧ ಮನೆಗಳಲ್ಲಾಗಿ ಸಿದ್ಧಪಡಿಸಲಾದ ಸಂತ್ರಸ್ತ ಶಿಬಿರಗಳಲ್ಲಿ ತಾತ್ಕಾಲಿಕ ವಾಸ ಸೌಕರ್ಯ ಏರ್ಪಡಿಸಲಾಗಿದೆ.

ಪತ್ತುಕುಡಿಯ ನಾರಾಯಣನ್ ಎಂಬವರ ಮನೆ ಗುಡ್ಡೆ ಕುಸಿತದಿಂದ ಹಾನಿಗೊಂಡಿದೆ.ಚುಳ್ಳಿಕೆರೆಯಲ್ಲೂ ಭೂಕುಸಿತದ ಭೀತಿ ಉಂಟಾಗಿದ್ದು ಅದರಿಂದಾಗಿ ಒಟ್ಟಕಂಡಿ ಮತ್ತು ಕುಟ್ಯಾನ ಕಾಲನಿಗಳ 20 ಕುಟುಂಬಗಳ ನೂರಾರು ಮಂದಿಯನ್ನು ಕಂದಾಯ ಮತ್ತು ಪಂಚಾಯತ್ ಅಧಿಕಾರಿಗಳ ನೇತೃತ್ವದಲ್ಲಿ ಚುಳ್ಳಿಕೆರೆ ಸರಕಾರಿ ಎಲ್‌ಪಿ ಶಾಲೆಯಲ್ಲಿ ಏರ್ಪಡಿಸಲಾಗಿರುವ  ಸಂರಕ್ಷಣಾ ಕೇಂದ್ರಗಳಿಗೆ ಸ್ಥಳಾಂತರಿಸ ಲಾಗಿದೆ. ಇದರಲ್ಲಿ ಶಯ್ಯಾವಸ್ಥೆಯಲ್ಲಿರುವ ವ್ಯಕ್ತಿಯೋ ರ್ವರನ್ನು  ಪೂಡಂಗಲ್ ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ.

ಪನತ್ತಡಿ ಕಮ್ಮಾಡಿ ಹೊಳೆಯಲ್ಲಿ ಮಳೆ ನೀರು ತುಂಬಿ ಅಲ್ಲಿ ಭಾರೀ ಪ್ರವಾಹದ ಭೀತಿಯೇ ಎದುರಾಗಿದೆ. ಇದರಿಂದಾಗಿ ಆ ಪರಿಸರದ ೨೨ ಮಂದಿ ಒಳಗೊಂಡ ಎಂಟು ಕುಟುಂಬಗಳನ್ನು ಇತರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ತೃಕ್ಕರಿಪುರ ಮಯ್ಯಿಚ್ಚ ಹೊಳೆಯಲ್ಲಿ  ಪ್ರವಾಹ ಭೀತಿ ಎದುರಾಗಿದೆ.

 ಕಾಸರಗೋಡು, ಚೆರ್ಕಳದಿಂದ ಚಟ್ಟಂಚಾಲ್ ತನಕದ ರಾಷ್ಟ್ರೀಯ ಹೆದ್ದಾರಿಯಲ್ಲೂ ಗುಡ್ಡೆ ಕುಸಿತ ಬೆದರಿಕೆ ಉಂಟಾಗಿದ್ದು, ಅದರಿಂದಾಗಿ ಈ ರಸ್ತೆಯಲ್ಲಿ ಅಗೋಸ್ತ್ ೩ರ ತನಕ ಜಾಗ್ರತಾ ನಿರ್ದೇಶ ನೀಡಲಾಗಿದೆ. ಮಧೂರು ಮಧುವಾಹಿನಿ ಹೊಳೆಯಲ್ಲೂ ಪ್ರವಾಹ ಭೀತಿ ಎದುರಾಗಿದೆ. ಇದು ಮಾತ್ರವಲ್ಲದೆ ಉಪ್ಪಳ, ಚೇರಂಗೈ, ತೃಕರಿಪುರ ಮೊದಲಾದೆಡೆಗಳಲ್ಲೂ ಕಡಲ್ಕೊರೆತ ಭೀತಿ ಎದುರಾಗಿದೆ. ಈ ಪ್ರದೇಶಗಳ  ಹಲವು ತೆಂಗಿನ ಮರಗಳು ಬಿದ್ದಿವೆ. ಮಾತ್ರವಲ್ಲ ಹಲವು ಮನೆಗಳು ಬೆದರಿಕೆ ಅಂಚಿನಲ್ಲಿವೆ.

ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಭೂಕುಸಿತದ ಸಾಧ್ಯತೆ ಇರುವುದರಿಂ ದಾಗಿ ಅಂತಹ ಎಲ್ಲಾ ಪ್ರದೇಶಗಳಲ್ಲೂ ಗರಿಷ್ಠ ಜಾಗ್ರತೆ ಪಾಲಿಸಲಾಗುತ್ತಿದೆ. ಅಗೋಸ್ತ್ ೩ರ ತನಕ ಭಾರೀ ಬಿರುಗಾಳಿ ಸಹಿತ ತೀವ್ರ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಅದರಿಂದಾಗಿ ಜಿಲ್ಲೆಯಲ್ಲಿ ಇಂದು ರೆಡ ಅಲರ್ಟ್ ಘೋಷಿಸಲಾಗಿದೆ.

ಜಿಲ್ಲೆಯ ಪ್ರವಾಸಿ ಕೇಂದ್ರಗಳಿಗೆ ಪ್ರವಾಸಿಗಳ ಸಂದರ್ಶನಕ್ಕೆ  ತಾತ್ಕಾಲಿಕ ನಿಷೇಧ ಹೇರಲಾಗಿದೆ. ಮಂಜೇಶ್ವರದಲ್ಲಿ ಕಡಲ್ಕೊರೆತ ತಲೆದೋರಿದ್ದು, ಇದರಿಂದಾಗಿ ಸಮುದ್ರದ  ದಡದಿಂದ 30 ಮೀಟರ್ ತನಕ ನೀರು ನುಗ್ಗಿದೆ. ಹಲವು ಮರಗಳು ರಸ್ತೆಗೆ ಬಿದ್ದಿವೆ. ಇದರಲ್ಲಿ ಹಲವು ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು, ವಿದ್ಯುತ್ ಸಂಪರ್ಕ ಕಡಿದು ಹೋಗಿದೆ. ವಲಿಯಪರಂಬ ಪಡನ್ನಕ್ಕಾಡ್‌ನಲ್ಲಿ ಕಡಲ್ಕೊರೆತದ ಭೀತಿ ಆವರಿಸಿದೆ. ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯ ಹಲವೆಡೆಗಳಲ್ಲಿ ಭಾರೀ ನಾಶನಷ್ಟ ಉಂಟಾಗಿದೆ. ಹಲವು ಮನೆಗಳಿಗೆ ಹಾನಿ ಉಂಟಾಗಿದ್ದು, ಭಾರೀ ಕೃಷಿ ನಾಶವೂ ಉಂಟಾಗಿದೆ.

Leave a Reply

Your email address will not be published. Required fields are marked *

You cannot copy content of this page