ಜಿಲ್ಲೆಯಲ್ಲೂ ಹೆಪಟೈಟಿಸ್ ಎ ಜಾಗ್ರತೆ ಪಾಲಿಸಲು ಡಿಎಂಒ ಕರೆ
ಕಾಸರಗೋಡು: ಜಿಲ್ಲೆಯ ಕೆಲವೆಡೆ ಹೆಪಟೈಟಿಸ್ ಎ ರೋಗ ಹರಡುತ್ತಿರು ವುದಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿ ಈ ರೋಗ ಬಾಧಿಸಿದ ವ್ಯಕ್ತಿ ಮೃತಪಟ್ಟ ಬಗ್ಗೆ ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಜನರು ಜಾಗ್ರತೆ ಪಾಲಿಸಬೇಕೆಂದು ಜಿಲ್ಲಾ ವೈದ್ಯಾಧಿಕಾರಿ ಡಾ|ಎ.ವಿ. ರಾಮದಾಸ್ ತಿಳಿಸಿದ್ದಾರೆ. ಮಲಿನಜಲ, ಆಹಾರ ಮೂಲಕ ಈ ರೋಗ ಹರಡುತ್ತದೆ. ರೋಗಾಣು ದೇಹಕ್ಕೆ ಸೇರಿಕೊಂಡು ಎರಡರಿಂದ ಆರು ವಾರಗಳ ಬಳಿಕವೇ ರೋಗ ಲಕ್ಷಣಗಳು ಕಂಡುಬರುತ್ತದೆ. ರೋಗ ಲಕ್ಷಣ ಕಂಡುಬಂದಲ್ಲಿ ಶೀಘ್ರ ಆರೋಗ್ಯ ಕೇಂದ್ರಗಳಿಗೆ ತೆರಳಿ ಚಿಕಿತ್ಸೆ ಪಡೆಯಬೇ ಕೆಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಹಳದಿಕಾಮಾಲೆ (ಚರ್ಮ ಹಾಗೂ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು), ಆಯಾಸ, ವಾಂತಿ, ಹೊಟ್ಟೆನೋವು, ತಲೆನೋವು, ಜ್ವರ ಮೊದಲಾದವುಗಳು ಹೆಪಟೈಸಿಸ್ ಎ ಯ ಲಕ್ಷಣಗಳಾಗಿವೆ.