ಜಿಲ್ಲೆಯಾದ್ಯಂತ ಸಂಭ್ರಮದ ‘ಈದುಲ್ ಫಿತ್’ ಆಚರಣೆ
ಕಾಸರಗೋಡು: ಜಿಲ್ಲೆಯಾದ್ಯಂತ ನಿನ್ನೆ ಸಂಭ್ರಮದಿಂದ ಮುಸ್ಲಿಂ ಬಾಂಧವರು ಈದುಲ್ ಫಿತ್ ಆಚರಿಸಿದರು. ಕಾಸರಗೋಡಿನಲ್ಲಿ ವಿಸ್ಡಮ್ ಟೌನ್ ಮಸೀದಿ ಈದ್ಗಾಹ್, ಪುತ್ತಿಗೆ ಮುಹಿಮ್ಮತ್ ಜಮಾ ಮಸೀದಿ ಸಹಿತ ವಿವಿಧ ಕಡೆಗಳಲ್ಲಿ ಈದ್ ನಮಸ್ಕಾರ ನಡೆಸಲಾಗಿದೆ.
ಮಂಜೇಶ್ವರ ತಾಲೂಕು ವ್ಯಾಪ್ತಿಯ ಕುಂಜತ್ತೂರು, ಉದ್ಯಾವರ, ಮಂಜೇಶ್ವರ, ಉಪ್ಪಳದ ವಿವಿಧ ಮಸೀದಿಗಳಲ್ಲಿ ವಿಶೇಷ ಈದ್ ನಮಸ್ಕಾರ ನೆರವೇರಿಸಲಾಯಿತು. ಅರ್ಹರಿಗೆ ಫಿತರ್ ಝಕಾತ್ ನೀಡಿದ ಬಳಿಕ ಹೊಸ ಬಟ್ಟೆ ಧರಿಸಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಕೆಲವು ಮಸೀದಿಗಳಲ್ಲಿ ಮಹಿಳೆಯರಿಗೂ ನಮಸ್ಕಾರ ಮÁಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಕುಂಜತ್ತೂರು ಮಸ್ಜಿದುನ್ನೂರು ಮಸೀದಿ ಉಸ್ತಾದ್ ನೌಫಲ್ ಒಟ್ಟುಮಾಲ್, ದಾರುಸ್ಸಲಾಂ ಸಲಫಿ ಮಸೀದಿ ಈದ್ಗಾದಲ್ಲಿ ಮೊಹಮ್ಮದಲಿ ಸಲಫಿ, ಉದ್ಯಾವರ ಸಾವಿರ ಜಮಾಯತ್ ಮಸೀದಿಯಲ್ಲಿ ಖತೀಬರಾದ ಅಬ್ದುಲ್ ಕರೀಂ ಧಾರಿಮಿ, ಈದ್ಗಾ ಕಡಂಬಾರಿನಲ್ಲಿ ಉಸ್ತಾದ್ ನೂರುಲ್ ಹಸನ್ ಮದೀನಿ, ಪೊಸೋಟು ಜುಮಾ ಮಸೀದಿಯಲ್ಲಿ ಸಬೀರ್ ಫೈಝಿ ನೇತೃತ್ವದಲ್ಲಿ ಈದ್ ನಮಾಝ್ ಹಾಗೂ ಖುತ್ಬಾ ನಿರ್ವಹಿಸಲಾಯಿತು.
ಈದ್ ಸಂದೇಶದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡುವಂತೆ ಧಾರ್ಮಿಕ ಮುಖಂಡರು ಜಾಗೃತಿ ಮೂಡಿಸಿದರು.