ಜ್ಯೋತಿಷ್ ಸಂಸ್ಮರಣೆ, ಸ್ಮೃತಿ ಮಂಟಪ ಉದ್ಘಾಟನೆ
ಅಣಂಗೂರು: ಜೆ.ಪಿ ನಗರ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಸಾಮಾಜಿಕ ಕಾರ್ಯಕರ್ತ,ಸಮಾಜ ಸೇವಕ ಜ್ಯೋತಿಷ್ ಕಾಸರಗೋಡು ಅವರ ೨ನೇ ವರ್ಷದ ಸಂಸ್ಮರಣೆ ಅಣಂಗೂರು ಜೆ.ಪಿ ನಗರದಲ್ಲಿ ನಡೆಯಿತು. ಇದರಂಗವಾಗಿ ಅಂದು ಬೆಳಿಗ್ಗೆ ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ಜೆ.ಪಿನಗರ ಗೆಳೆಯರ ಬಳಗದವರ ನೇತೃತ್ವದಲ್ಲಿ ರಕ್ತದಾನ ಶಿಬಿರ ನಡೆಯಿತು. ಸಂಜೆ ಜೆ.ಪಿ ನಗರಕೇಸರಿ ಮೈದಾನದಲ್ಲಿ ನೂತನವಾಗಿ ನಿರ್ಮಿಸಿದ ಸ್ಮೃತಿ ಮಂಟಪವನ್ನು ಪುಷ್ಪಾರ್ಚನೆಯ ಮೂಲಕ ಜ್ಯೋತಿಷ್‌ರ ತಂದೆ ಮಣಿ ಮತ್ತು ತಾಯಿ ರಾಜೀವಿ ಉದ್ಘಾಟಿಸಿದರು. ಸಮಾಜ ಸೇವಕ ಶಂಕರ ಜೆ.ಪಿ ನಗರ್ ಮಾತನಾಡಿ ಜ್ಯೋತಿಷ್‌ರ ಅಗಲುವಿಕೆ ತುಂಬಲಾರದ ನಷ್ಟ ತಂದಿದೆ. ಅವರ ಸಮಾಜ ಸೇವೆ, ಅವರ ಆದರ್ಶ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂದರು. ಜೆ.ಪಿ ನಗರ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಸಾದ ಕುಮಾರ್ ಶೆಟ್ಟಿ ಸ್ವಾಗತಿಸಿ, ಅಜಿತ್ ಜೆ.ಪಿ ನಗರ್ ನಿರೂಪಿಸಿದರು.