ಜ್ವರದಿಂದ ಬಳಲುತ್ತಿರುವ ಕುಂಬಳೆ ಆಸ್ಪತ್ರೆಗಳಲ್ಲಿ ರೋಗಿಗಳ ಸಂದಣಿ
ಕುಂಬಳೆ: ಹವಾಮಾನ ವೈಪರೀತ್ಯ, ಮಳೆಗಾಲ ರೋಗಗಳು ಹೆಚ್ಚಿದ ಹಿನ್ನೆಲೆಯಲ್ಲಿ ಜ್ವರ ಬಾಧಿಸಿ ಕುಂಬಳೆ ಸರಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸರದಿ ಸಾಲು ಕಂಡು ಬರುತ್ತಿದೆ. ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳ ತಪಾಸಣೆಗೆ ಡಾಕ್ಟರ್‌ಗಳ ಕೊರತೆಯಿದ್ದು, ಲ್ಯಾಬ್ ಟೆಸ್ಟ್, ಔಷಧಿ ಖರೀದಿಗಾಗಿ ತುಂಬಾ ಹೊತ್ತು ರೋಗಿಗಳು ಕಾಯಬೇಕಾದ ಅವಸ್ಥೆ ಇದೆ ಎಂದು ದೂರಲಾಗಿದೆ.
ಕುಂಬಳೆ ಸಾಮಾಜಿಕ ಆರೋಗ್ಯ ಕೇಂದ್ರದಲ್ಲಿ 500ರಷ್ಟು ರೋಗಿಗಳು ಪ್ರತಿ ದಿನ ತಲುಪುತ್ತಿದ್ದಾರೆ. ಸಂಜೆ 5 ಗಂಟೆವರೆಗೆ ಮಾತ್ರವೇ ಇಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಹೆಚ್ಚಿನ ದಿನಗಳಲ್ಲಿ ಓರ್ವ ಡಾಕ್ಟರ್‌ರ ಸೇವೆ ಮಾತ್ರವೇ ಇಲ್ಲಿ ಲಭಿಸುತ್ತಿರುವುದು. ಕೆಲವೊಮ್ಮೆ ಇಬ್ಬರು ಡಾಕ್ಟರ್‌ಗಳು ತಲುಪುತ್ತಾರೆ. ಓರ್ವ ವೈದ್ಯಾಧಿಕಾರಿ ಇದ್ದರೂ ಅವರಿಗೆ ಇತರ ಕಚೇರಿ ಕೆಲಸಗಳಿರುವ ಕಾರಣ ತಪಾಸಣೆಗೆ ಸಮಯ ಲಭಿಸುತ್ತಿಲ್ಲವೆನ್ನಲಾಗಿದೆ.
ಕುಂಬಳೆಯಲ್ಲಿರುವ ಖಾಸಗಿ ಆಸ್ಪತ್ರೆಗಳ ಸ್ಥಿತಿ ಕೂಡಾ ಇದಕ್ಕಿಂತ ಭಿನ್ನವಾಗಿಲ್ಲ. ಕ್ಯಾಶ್ವಲಿಟಿಗೆ ತಲುಪುವ ರೋಗಿಗಳನ್ನು ಪರಿಶೀಲಿಸಲು ಓರ್ವ ಡ್ಯೂಟಿ ಡಾಕ್ಟರ್ ಮಾತ್ರವೇ ಇದ್ದು, ಇಲ್ಲಿನ ಖಾಸಗಿ ಆಸ್ಪತ್ರೆಗಳಲ್ಲೂ ದಿನನಿತ ಸರದಿ ಸಾಲು ಕಂಡು ಬರುತ್ತದೆ.
ಸರಕಾರಿ ಆಸ್ಪತ್ರೆಗಳ ಚಟುವಟಿಕೆಗಳನ್ನು ದಕ್ಷಗೊಳಿಸಲು ರಜೆಯಲ್ಲಿರುವ ಡಾಕ್ಟರ್‌ಗಳನ್ನು ಹಾಗೂ ಆರೋಗ್ಯ ಕಾರ್ಯಕರ್ತರನ್ನು ಕೆಲಸದಲ್ಲಿ ಪ್ರವೇಶಿಸುವಂತೆ ಮಾಡಲು ಕಠಿಣ ಕ್ರಮ ಕೈಗೊಳ್ಳಬೇಕು. ನಿವೃತ್ತರಾದ ಡಾಕ್ಟರ್‌ಗಳ ಸೇವೆಯನ್ನು ತುರ್ತಾಗಿ ಲಭ್ಯಗೊಳಿಸಿ ರೋಗಿಗಳ ಸಮಸ್ಯೆ ಪರಿಹರಿಸಲು ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.