ಟ್ಯಾಂಕರ್ ಲಾರಿ ೩ ವಾಹನಗಳಿಗೆ ಢಿಕ್ಕಿ ಹೊಡೆದು ಪಲ್ಟಿ: ೮ ಮಂದಿಗೆ ಗಾಯ
ಕಣ್ಣೂರು: ನಿಯಂತ್ರಣ ತಪ್ಪಿದ ಗ್ಯಾಸ್ ಟ್ಯಾಂಕರ್ ಲಾರಿ ಇತರ ವಾಹನಗಳಿಗೆ ಢಿಕ್ಕಿ ಹೊಡೆದು ಮಗುಚಿಬಿದ್ದು ಚಾಲಕ ಸಹಿತ ಎಂಟು ಮಂದಿ ಗಾಯಗೊಂಡ ಘಟನೆ ನಡೆದಿದೆ. ಪಿಲಾತ್ತರ-ಪಯ್ಯನ್ನೂರು ಮಧ್ಯೆ ಪಳಯಂಗಾಡಿ ಸೇತುವೆಯಲ್ಲಿ ಇಂದು ಮುಂಜಾನೆ ೧.೩೦ರ ವೇಳೆ ಅಪಘಾತವುಂಟಾಗಿದೆ. ಮಂಗಳೂರಿನಿಂದ ಅಡುಗೆ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತಕ್ಕೀಡಾಗಿದೆ. ಟ್ರಾವಲರ್ ಸಹಿತ ಮೂರು ವಾಹನಗಳಿಗೆ ಢಿಕ್ಕಿ ಹೊಡೆದು ಟ್ಯಾಂಕರ್ ಲಾರಿ ಮಗುಚಿ ಬಿದ್ದಿದೆ. ಅನಿಲ ಸೋರಿಕೆಯಾಗ ದಿರುವುದರಿಂದ ಭಾರೀ ದುರಂತ ತಪ್ಪಿದೆ. ಅಪರಿಮಿತ ವೇಗದಲ್ಲಿ ಸಂಚರಿಸಿದ ಟ್ಯಾಂಕರ್ ಲಾರಿ ಮೊದಲು ಟೆಂಪೋ ಟ್ರಾವಲರ್‌ಗೆ ಢಿಕ್ಕಿ ಹೊಡೆದಿದೆ. ಕಲ್ಲಿಕೋಟೆಯ ಸಂಬಂಧಿಕರ ಮನೆಗೆ ತೆರಳಿ ಮರಳುತ್ತಿದ್ದ ಕಾಞಂಗಾಡ್ ನಿವಾಸಿಗಳು ಸಂಚರಿಸಿದ ಟ್ರಾವಲರ್‌ಗೆ ಲಾರಿ ಢಿಕ್ಕಿ ಹೊಡೆದಿದೆ. ಟ್ರಾವಲರ್‌ಗೆ ಢಿಕ್ಕಿ ಹೊಡೆದ ಬೆನ್ನಲ್ಲೇ ಎರಡು ಕಾರುಗಳಿಗೆ ಲಾರಿ ಢಿಕ್ಕಿ ಹೊಡೆದಿದೆ. ಟ್ರಾವಲರ್‌ನಲ್ಲಿದ್ದ ೭ ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಅವರನ್ನು ಕಣ್ಣೂರು ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ದಾಖಲಿಸಲಾಗಿದೆ. ಲಾರಿ ಚಾಲಕ ಕೊಲ್ಲಂ ನಿವಾಸಿ ಪ್ರಶಾಂತ್ ಕುಮಾರ್ (೪೦) ಕೂಡಾ ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿ ದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ ಪಳಯಂಗಾಡಿ ಮೂಲಕ ಕಣ್ಣೂರಿಗೆ ವಾಹನ ಸಂಚಾರ ಮೊಟಕುಗೊಂ ಡಿದೆ. ಇಂದು ಮಧ್ಯಾಹ್ನದೊಳಗೆ ಮಂಗಳೂರಿನಿಂದ ಅಧಿಕಾರಿಗಳು ತಲುಪಿ ಲಾರಿಯಿಂದ ಅನಿಲ ಬೇರೊಂದು ಲಾರಿಗೆ ಬದಲಾಯಿಸುವರು. ಅಗ್ನಿಶಾಮಕದಳ ಹಾಗೂ ಪೊಲೀಸರು ಸ್ಥಳದಲ್ಲಿದ್ದು ಸುರಕ್ಷಾ ಕಾರ್ಯದಲ್ಲಿ ನಿರತರಾಗಿದ್ದಾರೆ.