ಡಿವೈಎಫ್‌ಐ ಮಾನವ ಸರಪಳಿ ನಾಳೆ
ಕಾಸರಗೋಡು: ಕೇಂದ್ರ ಸರಕಾರದ ಧೋರಣೆಗಳನ್ನು ಪ್ರತಿಭಟಿಸಿ ಡಿವೈಎಫ್‌ಐ ನಾಳೆ ಕಾಸರಗೋಡಿನಿಂದ ಆರಂಭಗೊಂಡು ತಿರುವನಂತಪುರ ತನಕ ಮಾನವ ಸರಪಳಿ ಆಂದೋಲನ ನಡೆಸಲಿದೆ. ಇದರಲ್ಲಿ ಜಿಲ್ಲೆಯಿಂದ ಒಂದು ಲಕ್ಷದಷ್ಟು ಮಂದಿ ಭಾಗವಹಿಸು ವರೆಂದು ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಳ್ಳಾಟ್, ಅಧ್ಯಕ್ಷ ಶಾಲು ಮಾಥ್ಯು, ಜತೆ ಕಾರ್ಯದರ್ಶಿ ಎ.ವಿ. ಶಿವಪ್ರಸಾದ್, ಸುಭಾಶ್ ಪಾಡಿ ಮತ್ತು ಜ್ಯೋತಿ ಚೆನ್ನಿಕೆರೆ ಎಂಬವರು ತಿಳಿಸಿದ್ದಾರೆ.
ನಾಳೆ ಸಂಜೆ ೫ ಗಂಟೆಗೆ ಕಾಸರಗೋಡು ರೈಲು ನಿಲ್ದಾಣದಿಂದ ಕಾಲಿಕಡವು ಅನ್ನೂರು ಸೇತುವೆ ತನಕ ಜಿಲ್ಲೆಯಲ್ಲಿ ೪೬.೪ ಕಿಲೋ ಮೀಟರ್ ತನಕ ಮಾನವ ಸರಪಳಿ ಮುಂದುವರಿಯಲಿದೆ. ಕಾಸರಗೋಡು ರೈಲು ನಿಲ್ದಾಣ ಪರಿಸರದಿಂದ ತೊಡಗುವ ಈ ಸರಪಳಿಯ ಮೊದಲಕೊಂಡಿಯಾಗಿ ಡಿವೈಎಫ್‌ಐ ಅಖಿಲ ಭಾರತ ಅಧ್ಯಕ್ಷ ಎ.ಎ. ರಹೀಂ ಭಾಗವಹಿಸುವರು ಮತ್ತು ಸರಪಳಿಯಲ್ಲಿ ಜಿಲ್ಲೆಯ ಕೊನೆಯ ಕೊಂಡಿಯಾಗಿ ಕಾಲಿಕಡವಿನಲ್ಲಿ ಮಾಜಿ ಸಂಸದ ಪಿ. ಕರುಣಾಕರನ್ ಭಾಗವಹಿಸುವರು. ಸಂಜೆ ೫ ಗಂಟೆಗೆ ಪ್ರತಿಜ್ಞಾ ಸ್ವೀಕರಿಸಿದ ಬಳಿಕ ಜಿಲ್ಲೆಯ ಪ್ರತೀ ಬ್ಲೋಕ್ ಕೇಂದ್ರಗಳಲ್ಲಿ ಸಾರ್ವಜನಿಕ ಸಭೆ ಹಮ್ಮಿಕೊಳ್ಳ ಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳು ತಿಳಿಸಿದ್ದಾರೆ.