ಡೆಂಗ್ಯೂ ಜ್ವರ ತಗಲಿದ ಯುವಕ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತ್ಯು
ಕಾಸರಗೋಡು: ಡೆಂಗ್ಯೂ ಜ್ವರ ತಗಲಿದ ಟ್ಯಾಪಿಂಗ್ ಕಾರ್ಮಿಕನಾದ ಯುವಕನನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟ ಘಟನೆ ನಡೆದಿದೆ. ಮೂಲತಃ ಪತ್ತನಂತಿಟ್ಟ ಪಟ್ಟಕ್ಕುಡಿ ವಲಿಯಕ್ಕಲ್ ಮಾಡ ಮೋಹನನ್-ಗೋಮತಿ ದಂಪತಿ ಪುತ್ರ, ಕರ್ನಾಟಕದ ವಿಟ್ಲದಲ್ಲಿ ಟ್ಯಾಪಿಂಗ್ ಕಾರ್ಮಿಕನಾಗಿದ್ದ ಶಿಬು ಒ.ಎಂ. (44) ಸಾವನ್ನಪ್ಪಿದ ಯುವಕ. ಡೆಂಗ್ಯೂ ಜ್ವರ ತಗಲಿ ಈತನನ್ನು ವಿಟ್ಲದಿಂದ ಕಾಸರ ಗೋಡು ಜನರಲ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅಸುನೀಗಿದ್ದಾರೆ. ಮೃತದೇಹವನ್ನು ಬಳಿಕ ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ವಿಟ್ಲ ಪೊಲೀಸರು ಇಲ್ಲಿಗೆ ಆಗಮಿಸಿದ ಬಳಿಕವಷ್ಟೇ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಿಸುವ ಬಗ್ಗೆ ನಿರ್ಧರಿಸಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಮೃತರು ಸಹೋದರರಾದ ಸಿಬಿ, ಶಿಜು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.